ಮುಂಬೈ, ನ.17(DaijiworldNews/AA): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ವ್ಯಕ್ತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಶಮಿ ಅವರ ಡ್ರೈವಿಂಗ್ ಲೈಸನ್ಸ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಈ ಡ್ರೈವಿಂಗ್ ಲೈಸನ್ಸ್ ಪ್ರಕಾರ ಪ್ರಸ್ತುತ ಮೊಹಮ್ಮದ್ ಶಮಿ ಅವರ ವಯಸ್ಸು 42. ಆದರೆ ಅಧಿಕೃತವಾಗಿ ಶಮಿ ಅವರು ಪ್ರಸ್ತಾಪಿಸಿರುವ ವಯಸ್ಸು 34 ವರ್ಷಗಳು. ಅಂದರಂತೆ ಇಲ್ಲಿ 8 ವರ್ಷಗಳನ್ನು ಶಮಿ ಅವರು ಮರೆ ಮಾಚಿದ್ದಾರೆ ಎಂದು ಮೋಹನ್ ಕೃಷ್ಣ ಅವರು ಆರೋಪಿಸಿದ್ದಾರೆ.
ಬಿಸಿಸಿಐ ನಿಯಮಗಳ ಅನುಸಾರ, ಆಟಗಾರರು ತಮ್ಮ ವಯಸ್ಸನ್ನು ಮರೆಮಾಚುವುದು ಗಂಭೀರ ಅಪರಾಧ. ಹೀಗೆ ವಯಸ್ಸು ಬದಲಿಸಿ ಹಲವು ಆಟಗಾರರು ಈ ಹಿಂದೆ ಸಿಕ್ಕಿ ಬಿದ್ದಿದ್ದರು. ಅಲ್ಲದೆ ಅಂತಹ ಆಟಗಾರರ ವಿರುದ್ಧ ಬಿಸಿಸಿಐ ಅಮಾನತಿನೊಂದಿಗೆ ಕಠಿಣ ಕ್ರಮ ಕೈಗೊಂಡಿತ್ತು.
ಸದ್ಯ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೂಡ ವಯಸ್ಸು ಮರೆಮಾಚಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ಮಾಡುವಂತೆ ಕೃಷ್ಣ ಮೋಹನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದ್ದು, ಶಮಿ ಅವರು ತನಿಖೆಗೆ ಒಳಪಡಲಿದ್ದಾರೆ. ಜೊತೆಗೆ ಇದು ನಿಜವಾದಲ್ಲಿ ಶಮಿ ಬ್ಯಾನ್ ಆಗುವ ಸಾಧ್ಯತೆ ಕೂಡ ಇದೆ.