ಮುಂಬೈ, ನ.15(DaijiworldNews/AA):2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ಸಮಸ್ಯೆಗೆ ಇನ್ನು ಯಾವುದೇ ತೀರ್ಮಾನ ಬಂದಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಈ ಪ್ರತಿಷ್ಠೆಯ ಹೋರಾಟದಿಂದಾಗಿ ಇದೀಗ ಐಸಿಸಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡಿದೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇತ್ತ ಪಾಕಿಸ್ತಾನ ಕೂಡ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಹಿಂದೇಟು ಹಾಕುತ್ತಿದೆ.
ಈ ಕಾರಣದಿಂದಾಗಿ ಐಸಿಸಿ ಇನ್ನೂ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸುಮಾರು 28 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಯನ್ನು ಕಳೆದುಕೊಳ್ಳಲು ಪಾಕಿಸ್ತಾನ ಬಯಸುತ್ತಿಲ್ಲ. ಇದರಿಂದಾಗಿ ಭಾರತದ ಮನವೊಲಿಸುವ ಕೆಲಸಕ್ಕೆ ಮತ್ತೊಮ್ಮೆ ಕೈಹಾಕಿರುವ ಪಾಕಿಸ್ತಾನ, ಹೊಸ ಬೇಡಿಕೆಯನ್ನು ಭಾರತದ ಮುಂದಿಟ್ಟಿದೆ.
ಒಂದು ವೇಳೆ ಭಾರತ, ಚಾಂಪಿಯನ್ಸ್ ಟ್ರೋಫಿಯನ್ನು ಆಡದಿದ್ದರೆ, ಐಸಿಸಿಗೆ ತುಂಬಲಾರದ ನಷ್ಟವಾಗಲಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಕೈತಪ್ಪಿದರೆ ಅದಕ್ಕೂ ಸುಮಾರು 1800ಕೋಟಿ ರೂ. ನಷ್ಟವಾಗಲಿದೆ. ಹೀಗಾಗಿ ಪಾಕಿಸ್ತಾನ, ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ.