ನವದೆಹಲಿ, ನ.14(DaijiworldNews/TA):2025 ರ ಐಸಿಸಿ ಚಾಂಪಿಯನ್ಸ್ಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹಿರಂಗವಾಗಿ ಮಾತನಾಡುವ ಸ್ವಭಾವಕ್ಕೆ ಹೆಸರುವಾಸಿಯಾಗಿರುವ ಅಫ್ರಿದಿ, ಎಕ್ಸ್ ಖಾತೆಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಬರೆದುಕೊಂಡಿದ್ದು, ‘ಕ್ರಿಕೆಟ್ ಒಂದು ಮಹತ್ವದ ಹಂತದಲ್ಲಿ ನಿಂತಿದೆ. ಬಹುಶಃ 1970 ರ ನಂತರ ಪಾಕಿಸ್ತಾನ್ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಕ್ರೀಡೆಗಾಗಿ ನಾವು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವ ಸಮಯವಿದು. ಇತಿಹಾಸದಿಂದ ವಿಭಜಿಸಲ್ಪಟ್ಟ ಎರಡು ದೇಶಗಳು ಒಲಂಪಿಕ್ಗಾಗಿ ಒಟ್ಟುಗೂಡಬಹುದಾದರೆ, ನಾವು ಕ್ರಿಕೆಟ್ಗಾಗಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಏಕೆ ಅದನ್ನು ಮಾಡಬಾರದು? ಎಂಬುವುದಾಗಿ ಅಫ್ರಿದಿ ಪ್ರಶ್ನಿಸಿದ್ದಾರೆ.
ಕ್ರಿಕೆಟ್ನ ಮೇಲ್ವಿಚಾರಕರಾಗಿ, ಅಹಂಕಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಕ್ರಿಕೆಟ್ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂಬುವುದಾಗಿ ಶಾಹಿದ್ ಅಫ್ರಿದಿ ಹೇಳಿಕೆ ನೀಡಿದ್ದಾರೆ. ಪಾಕ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಭಾಗವಹಿಸಲ್ಲ ಎಂಬ ಹೇಳಿಕೆಯೊಂದಿಗೆ ಆರಂಭವಾಗಿರುವ ಚರ್ಚೆಗೆ ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎಂಟ್ರಿ ಕೊಟ್ಟಂತಿದೆ.