ಬೆಂಗಳೂರು,ನ.10(DaijiworldNews/TA):ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ಕರ್ನಾಟಕ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದು, ಇದೀಗ ಕಿರಿಯ ಪುತ್ರ ಕೂಡ ಅಣ್ಣನ ಹಾದಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ವಿಜಯ್ ಮರ್ಚೆಂಟ್ ಟೂರ್ನಿಗಾಗಿ ಆಯ್ಕೆ ಮಾಡಲಾದ 35 ಸದಸ್ಯರಲ್ಲಿ ಅನ್ವಯ್ ಹೆಸರು ಕೂಡ ಕಾಣಿಸಿಕೊಂಡಿದೆ. ಈ ಟೂರ್ನಿಗಾಗಿ ಕರ್ನಾಟಕದ ಸಂಭಾವ್ಯ ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳು ಸ್ಥಾನ ಪಡೆದಿದ್ದು, ಅನ್ವಯ್ ಜೊತೆ ಆದಿತ್ಯ ಝಾ ಮತ್ತು ಜಾಯ್ ಜೇಮ್ಸ್ ಕೂಡ ಗ್ಲೌಸ್ ತೊಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ನಡೆದ ಅಂತರ ವಲಯ ಕೂಟದಲ್ಲಿ 14 ವರ್ಷದೊಳಗಿನವರ ರಾಜ್ಯ ತಂಡದ ನಾಯಕರಾಗಿ ಅನ್ವಯ್ ದ್ರಾವಿಡ್ ಯಶಸ್ವಿಯಾಗಿದ್ದರು. ಇತ್ತೀಚೆಗೆ ಕೆಎಸ್ಸಿಎ 16 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ತುಮಕೂರು ವಲಯ ವಿರುದ್ಧ ಬೆಂಗಳೂರು ವಲಯದ ಪರವಾಗಿ ಅನ್ವಯ್ ಅಜೇಯ 200 ರನ್ ಬಾರಿಸಿ ಹೆಸರುಪಡೆದಿದ್ದರು. ಇದೀಗ ವಿಜಯ್ ಮರ್ಚೆಂಟ್ ಟೂರ್ನಿಗಾಗಿ ಆಯ್ಕೆ ಮಾಡಲಾದ ಕರ್ನಾಟಕ ಸಂಭಾವ್ಯ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.