ಇಸ್ಲಾಮಾಬಾದ್, ಅ.13(DaijiworldNews/AA): ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲು ಪಿಸಿಬಿ ಆಯ್ಕೆ ಸಮಿತಿ ನಿರ್ಧಾರ ಮಾಡಿದೆ.
ಪಿಸಿಬಿ ಆಯ್ಕೆ ಸಮಿತಿ ನಿರ್ಧಾರದಂತೆ ಮುಲ್ತಾನ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಝಂ ಅವರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ 4ನೇ ಕ್ರಮಾಂಕದಲ್ಲಿ ಮತ್ತೋರ್ವ ಆಟಗಾರನಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಅಕ್ಟೋಬರ್ 20 ರಿಂದ ಶುರುವಾಗಲಿರುವ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಬಾಬರ್ ಆಝಂ ಅವರಿಗೆ ಸೂಚಿಸಲಾಗಿದೆ.
ಸದ್ಯ ಬಾಬರ್ ಆಝಂ ಅವರು ಕಳಪೆ ಫಾರ್ಮ್ ನಲ್ಲಿದ್ದು, ಅವರು ಅರ್ಧಶತಕ ಸಿಡಿಸಿ 2 ವರ್ಷಗಳೇ ಕಳೆದಿದೆ. ಇನ್ನು ಭಾರೀ ರನ್ ಸಿಡಿಸಿರುವ ಮುಲ್ತಾನ್ ಟೆಸ್ಟ್ ನಲ್ಲಿ ಬಾಬರ್ ಗಳಿಸಿದ್ದು ಕೇವಲ 35 ರನ್ ಗಳು. ಹೀಗಾಗಿ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನ ನೂತನ ಆಯ್ಕೆ ಸಮಿತಿ ತೀರ್ಮಾನಿಸಿದೆ.
ಕಳೆದ 18 ಇನಿಂಗ್ಸ್ಗಳಿಂದ ಒಂದೇ ಒಂದು ಅರ್ಧಶತಕ ಬಾರಿಸಲು ಬಾಬರ್ ಆಝಂ ವಿಫಲವಾಗಿರುವುದರಿಂದ ಅವರು ತಂಡದಲ್ಲಿ ಮುಂದುವರೆಯುವುದು ಸೂಕ್ತವಲ್ಲ. ಆದ್ದರಿಂದ ದ್ವಿತೀಯ ಟೆಸ್ಟ್ ಪಂದ್ಯದಿಂದ ಬಾಬರ್ ಆಝಂ ಅವರನ್ನು ಕೈಬಿಡುವಂತೆ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಬಾಬರ್ ಹೊರಬೀಳುವುದು ಬಹುತೇಕ ಅಂತಿಮವಾಗಿದೆ.