ಮುಂಬೈ, ಆ.27(DaijiworldNews/AA): ಮಹಿಳಾ ಟಿ20 ವಿಶ್ವಕಪ್ 2024 ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ವಿಶ್ವಕಪ್ಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.
ಈ 15 ಸದಸ್ಯರ ಮಹಿಳಾ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಜೊತೆಗೆ ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ.
ಈ ತಂಡದಲ್ಲಿ ಕನ್ನಡತಿ ಯುವ ಆಲ್ ರೌಂಡರ್ ಶ್ರೇಯಾಂಕಾ ಪಾಟೀಲ್ ಸ್ಥಾನ ಗಳಿಸಿದ್ದಾರೆ. ಆದರೆ ಅದಕ್ಕಿಂತ ಮುನ್ನ ಫಿಟ್ ನೆಸ್ ಅನ್ನು ಸಾಬೀತುಪಡಿಸುವಂತೆ ಬಿಸಿಸಿಐ ಸೂಚಿಸಿದೆ. ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಶ್ರೇಯಾಂಕಾ ಗಾಯಗೊಂಡಿದ್ದರು. ಇದಾದ ನಂತರ ಶ್ರೇಯಾಂಕಾ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಫಿಟ್ ನೆಸ್ ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಶ್ರೇಯಾಂಕಾ ಪಾಟೀಲ್ ಜೊತೆಗೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಯಾಸ್ತಿಕಾ ಭಾಟಿಯಾ ಕೂಡ ಫಿಟ್ ನೆಸ್ ಟೆಸ್ಟ್ ಗೆ ಒಳಗಾಗಬೇಕಿದೆ.
ಇನ್ನು ಈ ತಂಡದಲ್ಲಿ ವೇಗಿಗಳಾಗಿ ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ಸಿಂಗ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ಗಳಾಗಿ ರಾಧಾ ಯಾದವ್ ಮತ್ತು ಆಶಾ ಸೋಭಾನ ಕಾಣಿಸಿಕೊಳ್ಳಲಿದ್ದಾರೆ. ದೀಪ್ತಿ ಶರ್ಮಾ ಅವರು ತಂಡದಲ್ಲಿ ಹಿರಿಯ ಆಲ್ ರೌಂಡರ್ ಆಗಿ ಸ್ಥಾನ ಗಳಿಸಿದರೆ, ಪ್ರಮುಖ ಬ್ಯಾಟರ್ ಗಳಾಗಿ ಶಫಾಲಿ ವರ್ಮಾ ಹಾಗೂ ಜೆಮಿಮಾ ರೊಡ್ರಿಗಸ್ ಆಯ್ಕೆಗೊಂಡಿದ್ದಾರೆ. ಇವರೊಂದಿಗೆ ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ದಯಾಳನ್ ಹೇಮಲತಾ, ಸಜನಾ ಸಜೀವನ್, ವಿಕೆಟ್ ಕೀಪರ್ ಆಗಿ ರಿಚಾ ಘೋಷ್ ಆಯ್ಕೆಯಾಗಿದ್ದಾರೆ.