ಹರಿಯಾಣ, ಆ.19 (DaijiworldNews/AK) :ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಹರಿಯಾಣ ಸರ್ಕಾರ ಬಹುಮಾನ ಮೊತ್ತ ಘೋಷಿಸಿದೆ.
ಯಂಗ್ ಶೂಟರ್ ಮನು ಭಾಕರ್ 5 ಕೋಟಿ ರೂ. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ 4 ಕೋಟಿ ರೂ. ನೀಡಲಾಗಿದೆ. ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಭಾರತದ ಪರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿರುವ ಕಾರಣ ಮನು ಭಾಕರ್ಗೆ 5 ಕೋಟಿ ರೂ. ನೀಡಲಾಗಿದೆ.
ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ 4 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀಟರ್ ದೂರ ಎಸೆದು ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಮನು ಭಾಕರ್ ಅವರ ಜೊತೆಗೂಡಿ ಏರ್ ಪಿಸ್ತೂಲ್ ಮಿಶ್ರ ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ 2.5 ಕೋಟಿ ಬಹುಮಾನ ನೀಡಿದೆ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರಿಗೂ 2.50 ಕೋಟಿ ರೂ. ಬಹುಮಾನ ನೀಡಲಾಗಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಿಂಚಿರುವ ರಾಜ್ಯದ ಆಟಗಾರರಿಗೆ ಹರಿಯಾಣ ಸರ್ಕಾರ ಕೋಟಿ ಮೊತ್ತವನ್ನು ನೀಡಿ ಪ್ರೋತ್ಸಾಹಿಸಿದೆ.