ಮೈಸೂರು, ಆ.14(DaijiworldNews/AK):ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ರಾಜ್ಯದ 126 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಆದರೆ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದು, ಇದೀಗ ಚೆರ್ಚೆಯ ಕೇಂದ್ರವಾಗಿದೆ.
ಒಂದು ತಿಂಗಳ ಹಿಂದೆ ಅಮಾನತು ಆಗಿದ್ದ ಸಲೀಂ ಪಾಷಾ, ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯದ ಜೊತೆಗೆ ದಾಖಲೆಗಳ ಸೋರಿಕೆ ಮಾಡಿರುವ ಶಂಕೆಯ ಆರೋಪಗಳ ಹಿನ್ನೆಲೆ ಅಮಾನತುಗೊಳಿಸಲಾಗಿತ್ತು. ಆದರೂ 2024ನೇ ಸಾಲಿನ ಸಿಎಂ ಪದಕ ಪಟ್ಟಿಯಲ್ಲಿ ಸಲೀಂ ಪಾಷಾ ಅವರ ಹೆಸರು ಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಕೇಳಿಬಂದಿತ್ತು.. ಆರೋಪ ಸಾಭೀತಾದ ಹಿನ್ನೆಲೆ ಕಳೆದ ತಿಂಗಳಷ್ಟೇ ಅಮಾನತುಗೊಳಿಸಲಾಗಿತ್ತು. 2023ರ ಕರ್ತವ್ಯ ನಿರ್ವಹಣೆಗೆ ಪದಕ ನೀಡಲಾಗಿದೆ. ಈ ಮೂಲಕ ಸಿಎಂ ಪದಕ ಘೋಷಣೆ ಚರ್ಚೆಗೆ ಗ್ರಾಸವಾಗಿದೆ.