ನವದೆಹಲಿ, ಆ 14(DaijiworldNews/MS): ಅದಾನಿ ಸಮೂಹದ ವಿರುದ್ಧ ಅಮೆರಿಕದ ಬಂಡವಾಳ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ್ದ ವಂಚನೆ ಆರೋಪಗಳ ಬಗ್ಗೆ ತೆಗೆದುಕೊಂಡ ಕ್ರಮ ಕುರಿತು ಸೆಬಿ ಸ್ಥಿತಿಗತಿ ವರದಿ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಕಳೆದ ಜನವರಿ 3ರಂದು ಮೂರು ತಿಂಗಳ ಕಾಲಾವಕಾಶ ನೀಡಿತ್ತು ಎಂದು ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಮೇಲ್ಮನವಿ ತಿಳಿಸಿದೆ.
ಮೂರು ತಿಂಗಳ ಗಡುವು ಮುಗಿದರೂ ವರದಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ತಿವಾರಿ (ಜನವರಿ 3 ರ ಆದೇಶ ದೊರೆತ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರು) ಅವರು ಸುಪ್ರೀಂ ಕೋರ್ಟ್ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೆ ಪ್ರಸ್ತುತ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸಂಪೂರ್ಣ ತಪ್ಪಾಗಿ ಗ್ರಹಿಸಿದ್ದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡದೇ ಇರುವುದಕ್ಕೆ ಸಮಂಜಸ ಕಾರಣ ಏನೆಂದು ತಿಳಿಸಿಲ್ಲ. ಸೆಬಿಯ ತನಿಖೆಗೆ ನ್ಯಾಯಾಲಯ ಯಾವುದೇ ಗಡುವು ವಿಧಿಸಿಲ್ಲ ಎಂದು ರಿಜಿಸ್ಟ್ರಾರ್ ತರ್ಕಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಜೊತೆಗೆ (ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವ ಮೂಲಕ) ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಹಿತಾಸಕ್ತಿ ಸಂಘರ್ಷ ಹೊಂದಿದ್ದು ಅದಾನಿ ಸಮೂಹದ ವಿರುದ್ಧ ಸೆಬಿ ತನಿಖೆಗೆ ಇದು ಅಡ್ಡಿಯಾಗಬಹುದು ಎಂದ ಹಿಂಡೆನ್ಬರ್ಗ್ ರಿಸರ್ಚ್ನ ಇತ್ತೀಚಿನ ವರದಿಯನ್ನು ಈ ಮನವಿ ಎತ್ತಿ ತೋರಿಸಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ.