ಹೊಸಪೇಟೆ, ಆ.13(DaijiworldNews/AK): ತುಂಗಭದ್ರಾ ಜಲಾಶಯ ಗೇಟ್ ನ ದುರಸ್ತಿಯನ್ನು ತ್ವರಿತವಾಗಿ ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ತುಂಗಭದ್ರಾ ಜಲಾಶಯ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ತುಂಗಭದ್ರಾ ಜಲಾಶಯದ ನೀರನ್ನು ಗೇಟ್ ಗಳ ಮೂಲಕ ಬಿಡಲಾಗುತ್ತಿತ್ತು. ನೀರಿನ ಹರಿವನ್ನು ತಡೆಯುವಂತಹ ಗೇಟ್ ಗಳಲ್ಲಿ19ನೇ ಗೇಟ್ ತುಂಡಾಗಿದೆ. ಜಲಾಶಯ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚಿಸಿದ್ದೀನಿ. ಅವರಿಂದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಜಲಶಾಯ ಮಂಡಳಿಯದಾಗಿದ್ದು, ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಈ ಜಲಾಶಯದ ನಿರ್ಮಾಣ ದೇಶಕ್ಕೆ ಸ್ವಾತಂತ್ರ್ಯ ಬಂದ ಮರು ವರ್ಷವೇ ಕೈಗೆತ್ತಿಕೊಂಡು 1948 ರಲ್ಲಿ ಪ್ರಾರಂಭವಾಗಿ 1953 ರಲ್ಲಿ ಪೂರ್ಣಗೊಂಡು, 1954 ರಿಂದ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಪ್ರಾರಂಭಿಸಲಾಯಿತು. ಸುಮಾರು 70 ವರ್ಷಗಳಷ್ಟು ಹಳೆಯದಾದ ಡ್ಯಾಂನಲ್ಲಿ ಇಲ್ಲಿನವರೆಗೆ ಯಾವುದೇ ಗೇಟ್ ನ ಚೈನ್ ತುಂಡಾಗಿರಲಿಲ್ಲ ಎಂದು ವಿವರಿಸಿದರು.
ತಜ್ಞರ ಸಲಹೆ ಮೇರೆಗೆ ದುರಸ್ತಿ ಕಾರ್ಯ:
ಜಲಾಶಯದಲ್ಲಿ ಈ ವರ್ಷ 115 ಟಿಎಂಸಿ ನೀರಿದ್ದು, ಈಗಾಗಲೇ 25 ಟಿಎಂಸಿ ನೀರನ್ನು ರೈತರ ಜಮೀನಿಗೆ ಬಿಡಲಾಗಿದೆ. ರೈತರ ಮೊದಲನೇ ಬೆಳೆಗೆ 90 ಟಿಎಂಸಿ ನೀರು ಬೇಕಾಗಿದ್ದು, ಈ ಪ್ರಮಾಣದ ನೀರು ಜಲಾಶಯದಲ್ಲಿ ಲಭ್ಯವಿದೆ. ಆದರೆ ಜಲಾಶಯದ 19 ನೇ ಗೇಟ್ ತುಂಡಾಗಿರುವುದರಿಂದ 35 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಜಲಾಶಯದ ನೀರನ್ನು ಬಿಡದೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ನೀರು ಉಳಿಯುತ್ತದೆ. ಗೇಟ್ ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದುಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದ್ದು, ಕನ್ನಯ್ಯ ನಾಯ್ಡು ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ನವಲಿ ಜಲಾಶಯ: ಒಪ್ಪಿಗೆ ನಂತರ ಕಾಮಗಾರಿ ಪ್ರಾರಂಭ
ನವಲಿ ಜಲಾಶಯ ನಿರ್ಮಾಣಕ್ಕೆ15 ಸಾವಿರ ಕೋಟಿ ರೂ.ಗಳ ಡಿಪಿಆರ್ ತಯಾರಾಗಿದ್ದು, ಇದು ಅಂತರರಾಜ್ಯ ಯೋಜನೆಯಾಗಿದೆ. ಡಿಪಿಆರ್ ಗೆ ಒಪ್ಪಿಗೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಬಾಗಿನ ಅರ್ಪಿಸಲು ನಾನೇ ಬರುತ್ತೇನೆ
ತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಆಗಮಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.