ನವದೆಹಲಿಆ.13(DaijiworldNews/AK): ರಾಜ್ಯಕ್ಕೆ ಅಕ್ಕಿ ನೀಡುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಗೆ ಚರ್ಚಿಸಿ ಅವರು ಕರ್ನಾಟಕಕ್ಕೂ ಅಕ್ಕಿ ನೀಡಲು ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲಿ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾಗಿದ್ದೆ. ರಾಜ್ಯಕ್ಕೆ ಬೇಕಿರುವ ಅಗತ್ಯ ಅಕ್ಕಿಯನ್ನು ಕೊಡುವ ಭರವಸೆ ನೀಡಿದ್ದಾರೆ. ಪ್ರತಿ ತಿಂಗಳು 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಬಹುದು. ನಾನು ಸಿಎಂ ಮತ್ತು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಮುಂದಿನ ಹಂತದಲ್ಲಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಈ ಹಿಂದೆ ಕೇಂದ್ರ ಅಕ್ಕಿ ಕೊಡದಿದ್ದಾಗ ಹಣವನ್ನು ಸಂದಾಯ ಮಾಡಿದ್ದೆವು. ಈ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಜನರು ಹಣದ ಬದಲು ಬೇಳೆ, ಸಕ್ಕರೆ ಮತ್ತು ಎಣ್ಣೆಗೆ ಮನವಿ ಮಾಡಿದ್ದಾರೆ. ಜನರ ಬಯಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರಕ್ಕೆ ಅಕ್ಕಿಯ ಪ್ರಮಾಣದ ಬಗ್ಗೆ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಒಳ ಮೀಸಲಾತಿ ನೀಡುವ ಪ್ರತಿಕ್ರಿಯಿಸಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಾನು ಸ್ವಾಗತ ಮಾಡುತ್ತೇನೆ. 30 ವರ್ಷಗಳ ಕಾಲ ಹಲವು ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿದ್ದವು. ಯಾವ ಜಾತಿಗೂ ತೊಂದರೆಯಾಗದ ರೀತಿ ಎಲ್ಲಾ ರೀತಿಯಲ್ಲೂ ಅವಕಾಶ ಮಾಡಿಕೊಡಬೇಕು ಎಂಬ ನಿರ್ಧಾರವಾಗಿದೆ ಎಂದರು.