ಬೆಂಗಳೂರು, ಆ.13(DaijiworldNews/AK): ಒಂದೂವರೆ ವರ್ಷ ಈ ಸರಕಾರದ ಕೈ ಕಟ್ಟಿ ಹಾಕಿದವರು ಯಾರು? ರಾಜೀ ರಾಜಕೀಯಕ್ಕಾಗಿ ಸುಮ್ಮನಿದ್ದರೇ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷ ನಾಯಕರಾಗಿದ್ದಾಗ ಬಿಜೆಪಿ ಸರಕಾರದ ವಿರುದ್ಧ 40 ಶೇಕಡಾ ಸರಕಾರ ಇದು ಎಂದು ಆರೋಪ ಮಾಡಿದ್ದರು. ಒಂದೂವರೆ ವರ್ಷ ಆಗಿದೆ. ಶೇ 40ರ ಕುರಿತು ಯಾರ ಮೇಲೆ ಎಫ್ಐಆರ್ ಹಾಕಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆಗ ಅವರು ಸುಳ್ಳು ಆರೋಪ ಮಾಡಿದ್ದರು. ಈಗಲೂ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ವಿಷಯಾಂತರ ಮಾಡಲು, ಜನರಲ್ಲಿ ಗೊಂದಲ ಮೂಡಿಸಲು, ಅವರ ಮೇಲೆ ಆರೋಪ ಬಂದಾಕ್ಷಣ ಇನ್ನೊಬ್ಬರ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಉತ್ತರಿಸುವ ಬದಲಾಗಿ ಬ್ಲಾಕ್ಮೇಲ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಹಾಗಿದ್ದರೆ ನಿಮ್ಮ ಕೈ ಕಟ್ಟಿ ಹಾಕಿದವರು ಯಾರು ಎಂದು ಪ್ರಶ್ನಿಸಿದರು.ಬಿಜೆಪಿ ಕಾಲದಲ್ಲಿನ ಆರೋಪಗಳ ತನಿಖೆ ಕುರಿತ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಗಮನ ಸೆಳೆದಾಗ ಅವರು ಈ ಉತ್ತರ ನೀಡಿದರು.
ನಾವೇನಾದರೂ ಮಾಡ್ತೀವಿ; ನೀವು ಕೇಳಬೇಡಿ. ನೀವು ಮಾಡಿದರೆ ನಾವು ಕೇಳಲ್ಲ ಎಂಬ ರಾಜೀ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿನವರು ಸುಮ್ಮನಿದ್ದರೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನು ಮರೆತು ಹೇಳಿಕೆ ಕೊಟ್ಟಂತೆ ಕಾಣುತ್ತಿದೆ. ಬಹಳ ಹತಾಶರಾಗಿ (ಅಪ್ಸೆಟ್) ಹೇಳಿಕೆ ಕೊಟ್ಟಂತಿದೆ. ವಾಸ್ತವವಾದಿಯಾಗಿ ಯೋಚಿಸುವುದಕ್ಕಿಂತಲೂ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮೇಲ್ನೋಟಕ್ಕೆ ಅವರ ವಿರುದ್ಧ ಇದೆ, ಮೆರಿಟ್ ಇಲ್ಲ ಎಂದು ಅನಿಸಿದಾಗ ಇಮೋಷನಲ್ ಕಾರ್ಡ್ ಅನ್ನು ಬಹಳ ಜನ ಬಳಸುತ್ತಾರೆ ಎಂದರು.ಭ್ರಷ್ಟಾಚಾರ ಮುಚ್ಚಿ ಹಾಕಲು ಅವರಿಗೆ ಜಾತಿ ಬೇಕಾಗಿದೆ ಎಂದು ಟೀಕಿಸಿದರು.
ತಿಂದಿರುವವರು ಇವರು; ಸಪೋರ್ಟಿಗೆ ಜಾತಿ ಬೇಕಾಗಿದೆ. ತಿಂದವರು ಇವರೇ; ಜಾತಿಯವರಿಗೇನೂ ತಿನಿಸಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ಎಮೋಷನಲ್ ಕಾರ್ಡ್ ಬಳಸುತ್ತಿದ್ದಾರೆ. ಅವರು ವಿಪಕ್ಷದ ನಾಯಕನಲ್ಲ ಎಂದು ತಿಳಿಸಿದರು.