ಬೆಂಗಳೂರು,ಆ 13 (DaijiworldNews/TA) : ಜಲಪಾತದ ವೈಮಾನಿಕ ನೋಟವನ್ನು ಕಣ್ತುಂಬಿಕೊಳ್ಳಲು ಶೀಘ್ರವೇ ರೋಪ್ ವೇ ಗೆ ಚಾಲನೆ ದೊರೆಯಲಿದೆ. ಹೌದು ಇನ್ನು ಮುಂದೆ ಶಿವನ ಸಮುದ್ರದ ಸೌಂದರ್ಯವನ್ನು ರೋಪ್ ವೇ ಮೂಲಕ ನೋಡಬಹುದು.
ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ಸಂಪರ್ಕಿಸುವ ರೋಪ್ವೇ ಗೆ ಚಾಲನೆ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಭರಚುಕ್ಕಿಯಲ್ಲಿ ರೋಪ್ವೇ ಯೋಜನೆ ಕುರಿತು ಪ್ರಸ್ತಾಪಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಚಾಮರಾಜನಗರ ಸೂಕ್ತವಾಗಿದ್ದು, ರೋಪ್ವೇ ಯೋಜನೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು.
ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತಗಳು ಬೆಂಗಳೂರು ಜನರ ವಾರಾಂತ್ಯದ ಮೋಜು ಮಸ್ತಿ ತಾಣವಾಗಿದೆ. ಮಳೆಗಾಲದಲ್ಲಿ ಮೈದುಂಬಿ ಜಲಪಾತದ ನೀರು ಧುಮ್ಮಿಕ್ಕುತ್ತದೆ. ಆ ಸೊಬಗನ್ನು ಮತ್ತಷ್ಟು ಹತ್ತಿರದಿಂದ ಕಣ್ತುಂಬಿಕೊಳ್ಳಲು ರೋಪ್ ವೇ ಗಳು ಸಹಕಾರಿಯಾಗಲಿವೆ.ಈ ರೋಪ್ವೇ ಜನರು ಜಲಪಾತದ ವೈಮಾನಿಕ ನೋಟವನ್ನು ಪಡೆಯಲು ಸಹಾಯಕವಾಗುವುದು. ಇಷ್ಟೇ ಅಲ್ಲ, ಪ್ರವಾಸಿಗರು ಒಂದು ಜಲಪಾತದಿಂದ ಮತ್ತೊಂದು ಜಲಪಾತಕ್ಕೆ ತೆರಳಲು ಅನುಕೂಲವಾಗುತ್ತದೆ.