ಮೈಸೂರು, ಆ.12(DaijiworldNews/AA): ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ ಎಂದು ಹೇಳುವ ಮೂಲಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯ ಪಟ್ಟಿಯಲ್ಲಿದೆ. ಅದರ ಪ್ರಾಧಿಕಾರ ಮಾಡುವುದು ಕಾನೂನುಬದ್ಧವಲ್ಲ. ದೇಗುಲದ ನಿರ್ವಹಣೆ ನಮಗೆ ನೀಡಿದರೆ ನಾವು ಮಾಡಲು ಸಿದ್ಧ. ಪ್ರಾಧಿಕಾರಕ್ಕೆ ವಿರೋಧವಿದೆ. ಅದಕ್ಕೆ ಕೋರ್ಟ್ ಮೊರೆ ಹೋಗಲಾಗಿದೆ. ಪ್ರಾಧಿಕಾರದ ಹೆಸರಲ್ಲಿ ಸರ್ಕಾರ ರೂಲಿಂಗ್ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದಿದ್ದಾರೆ.
ಚಾಮುಂಡಿ ಬೆಟ್ಟದ ನಿರ್ವಹಣೆ ಸಂಬಂಧ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಿರ್ವಹಣೆ ಮಾಡಲು ಆಗೋದಿಲ್ಲ ಅಂತಾ ಬರೆದಿದ್ದರು. ಈಗ ನಾವು ನಿರ್ವಹಣೆ ಮಾಡೋ ಬಗ್ಗೆ ನಾನು ಹೆಚ್ಚೇನು ಮಾತಾಡೋದಿಲ್ಲ. ನ್ಯಾಯಾಲಯ, ಸರ್ಕಾರ ಈಗಲೂ ಒಪ್ಪಿದರೆ ಚಾಮುಂಡಿ ಬೆಟ್ಟವನ್ನ ನಾವೇ ನಿರ್ವಹಣೆ ಮಾಡ್ತೇವೆ. ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಿಕೋಳ್ಳಬೇಕು ಅನ್ನೋದು ನಮ್ಮ ವಾದ ಹೇಳಿದ್ದಾರೆ.
ಖಾಸಗಿ ಪ್ರಾಪರ್ಟಿ ಯಾವುದು ಅಂತಾ ರಾಜ್ಯ ಸರ್ಕಾರಕ್ಕೆ ಗೊತ್ತಿದೆ. 2001ರ ಕೇಸ್ ಪೆಂಡಿಗ್ ಇದೆ, ಇದಕ್ಕೂ ಮೊದಲೇ ಪ್ರಾಧಿಕಾರ ರಚನೆ ಏಕೆ? 2001ರ ಕೇಸ್ ಕ್ಲಿಯರ್ ಆಗಲಿ. 1974ರಲ್ಲಿ ನಿರ್ವಹಣೆ ಮಾಡಲು ಕಷ್ಟ ಅಂತಾ ಪತ್ರ ಬರೆದಿದ್ದು ನಿಜ. ಅಂದು ಬೇರೆ ಬೇರೆ ಕಾರಣ ಇತ್ತು. ಆ ರೀತಿ ಮ್ಯಾನೇಜ್ ಮಾಡಿ ಅಂತಾ ಕೊಟ್ಟಾಗ ನಿರ್ವಹಣೆ ಮಾಡಲಿ. ಆದರೆ ನೀವೇ ಸ್ವಂತ ಮಾಡಿಕೊಳ್ಳಿ ಅಂತಾ ನಾವು ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.