ವಿಜಯಪುರ, ಆ 12 (DaijiworldNews/TA) : ಬಿಜೆಪಿ ವಿರುದ್ಧವಾಗಿ ನಾವು ಜನಾಂದೋಲನ ಕಾರ್ಯಕ್ರಮ ಮಾಡಿದ್ದೇವೆ. ಐತಿಹಾಸಿಕ ಜನಾಂದೋಲನ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು, ಬಿಜೆಪಿಯವರು ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದ್ದರು. ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಮುಂದುವರೆದು ಮಾತನಾಡಿ ಬಿಜೆಪಿಯಲ್ಲಿ 20 ಬಣಗಳಿವೆ. ಆರ್.ಅಶೋಕ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ ಬಣ, ಅಶ್ವಥನಾರಾಯಣ ಬಣ, ಯತ್ನಾಳ-ಜಾರಕಿಹೋಳಿ ಬಣ, ಸಿ.ಟಿ.ರವಿ ಬಣ ಹೀಗೆ ಸಾಕಷ್ಟು ಬಣಗಳಿವೆ. ಒಂದೊಂದು ಬಣ ಪಾದಯಾತ್ರೆ ಮಾಡಲಿ ಎಂದು ಟಾಂಗ್ ನೀಡಿದರು.