ಮೈಸೂರು, ಆ.12(DaijiworldNews/AA): ಮೈಸೂರು ದಸರಾ ಮಹೋತ್ಸವದ ಗಜಪಯಣ ಆಗಸ್ಟ್ 21ರಂದು ನಡೆಯಲಿದೆ. ಹೀಗಾಗಿ ಅರಣ್ಯ ಇಲಾಖೆಯು ಸಿದ್ಧತೆ ಆರಂಭಿಸಿದೆ.
ಈ ಬಾರಿಯ ದಸರಾಗೆ 18 ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಈ ಗಜಪಡೆಯು 2 ತಿಂಗಳ ಮುಂಚಿತವಾಗಿಯೇ ಮೈಸೂರಿಗೆ ಆಗಮಿಸಲಿದೆ. ಮೈಸೂರಿಗೆ ಗಜಪಯಣ ದಿನಾಂಕ ನಿಗದಿಯಾದ ಹಿನ್ನೆಲೆ 4 ಹೆಚ್ಚುವರಿ ಆನೆಗಳನ್ನು ಸಹ ಇಲಾಖೆ ಗುರುತಿಸಿದೆ.
ಈ ಬಾರಿಯೂ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯುವೇ ಹೊರಲಿದ್ದಾನೆ. ಇನ್ನು 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳು, ಎರಡನೇ ಹಂತದಲ್ಲಿ 5 ಆನೆಗಳು ಮೈಸೂರಿಗೆ ಆಗಮಿಸಲಿವೆ.
ಇನ್ನು ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು, ಈ ಬಾರಿಯೂ ಒಟ್ಟು 14 ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆತರಲಾಗುತ್ತಿದೆ. ಮೊದಲ ತಂಡದ 9 ಆನೆಗಳಿಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ 21ರಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.