ಮಹಾರಾಷ್ಟ್ರ, ಆ 12 (DaijiworldNews/TA) : ಶರದ್ ಪವಾರ್ ಅವರ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಪಕ್ಷದ 20 ನಾಯಕರ ವಾಟ್ಸಾಪ್ ಹ್ಯಾಕ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಎನ್ಸಿಪಿ ಪಕ್ಷದ ಕಾರ್ಯಾಧ್ಯಕ್ಷೆ, ಸಂಸದೆ ಸುಪ್ರಿಯಾ ಸುಳೆ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಹ್ಯಾಕರ್ಸ್ ಹಣದ ಬೇಡಿಕೆಯನ್ನೂ ಇಟ್ಟಿದ್ದರು ಎನ್ನಲಾಗಿದೆ. ತನ್ನ ಖಾತೆಯನ್ನು ಮರುಸ್ಥಾಪಿಸಲು ಹ್ಯಾಕರ್ 32,000 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದ ಎಂಬ ಮಾಹಿತಿ ಸಿಕ್ಕಿದೆ.
ಮಾಹಿತಿ ಪ್ರಕಾರವಾಗಿ ಕೆಲವೇ ಗಂಟೆಗಳಲ್ಲಿ ಪೊಲೀಸರು ವಾಟ್ಸಾಪ್ ಅನ್ನು ಮರುಸ್ಥಾಪಿಸಿದ್ದಾರೆ.
ಸುಪ್ರಿಯಾ ಅವರು ದೌಂಡ್ ತೆಹಸಿಲ್ನಲ್ಲಿ ಪಾರ್ಟಿ ಕಾರ್ಯಕ್ರಮವೊಂದರಲ್ಲಿದ್ದಾಗ ತಮ್ಮ ವಾಟ್ಸಾಪ್ ಹ್ಯಾಕ್ ಆಗಿರುವುದು ಅರಿವಾಗಿದೆ. ಆಗಸ್ಟ್ 11 ರಂದು ಮಧ್ಯಾಹ್ನ 1 ಗಂಟೆಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ಸುಪ್ರಿಯಾ ಮೊದಲ ಮಾಹಿತಿ ನೀಡಿದರು. ನಂತರ ಸಂಜೆ 4.15ಕ್ಕೆ ವಾಟ್ಸಾಪ್ ಮರುಸ್ಥಾಪನೆ ಬಗ್ಗೆಯೂ ಮಾಹಿತಿ ನೀಡಿದ್ದರು.
ನನ್ನ ವಾಟ್ಸಾಪ್ ಬಳಸಿ ನನ್ನ ತಂಡದ ಸದಸ್ಯರೊಬ್ಬರಿಗೆ ಹ್ಯಾಕರ್ ಸಂದೇಶ ಕಳುಹಿಸಿದ್ದಾನೆ. ಹ್ಯಾಕರ್ 400 ಡಾಲರ್ ಕೇಳಿದ್ದ, ಈ ಸಂದೇಶದ ಬಗ್ಗೆ ನನ್ನ ತಂಡದ ಸದಸ್ಯರು ತಕ್ಷಣವೇ ನನಗೆ ತಿಳಿಸಿದ್ದರು. ಹ್ಯಾಕರ್ ತನ್ನ ತಂಡದ ಇನ್ನೊಬ್ಬ ಸದಸ್ಯನ ವಾಟ್ಸಾಪ್ ಖಾತೆಯನ್ನು ಸಹ ಹ್ಯಾಕ್ ಮಾಡಿದ್ದಾನೆ ಎಂದು ಸುಪ್ರಿಯಾ ಹೇಳಿಕೆ ನೀಡಿದ್ದಾರೆ.