ಬೆಂಗಳೂರು, ಆ 12 (DaijiworldNews/TA) : ಚನ್ನಪಟ್ಟಣ ಟಿಕೆಟ್ ನನಗೆ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಯೋಗೇಶ್ವರ್ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪಕ್ಷೇತರನಾಗಿ ಮತ್ತೆ ಗೆದ್ದು ಎನ್ಡಿಎ ಭಾಗವಾಗುತ್ತೇನೆ. ಏನೇನು ರಾಜಕೀಯ ತಿರುವು ಪಡೆಯುತ್ತದೆ ಕಾದುನೋಡಬೇಕು ಎಂದು ತಿಳಿಸಿದ್ದಾರೆ.
ಯಾವುದೇ ಚಿನ್ಹೆಯ ಅಡಿ ನಿಂತರೂ ಗೆಲ್ಲಿಸುತ್ತಾರೆ, ನನ್ನ ತಾಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ ಎಂದರು. ನಾನು ಕಾಂಗ್ರೆಸ್ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿಕೆಶಿ ಅವರು ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.
ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯದ ಕುರಿತಾಗಿ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ನನಗೂ ಹೆಚ್ಡಿಕೆಗೂ ಮಧ್ಯೆ ಭಿನ್ನಾಭಿಪ್ರಾಯ ಏನಿದೆ? ಬಿರುಕು ಮೂಡಿಸುವ ಪ್ರಯತ್ನ ಡಿಕೆಶಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಒಪ್ಪದಿದ್ದರೆ ಆಮೇಲೆ ನೋಡೋಣ ಎಂದು ಹೇಳಿದರು.