ಬೆಂಗಳೂರು, ಆ.11 (DaijiworldNews/AK): ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳುತ್ತಿದೆ. ಆದರೆ, ರಾತ್ರಿ ಒಂದು ಗಂಟೆಯವರೆಗೆ ಬ್ಯಾಂಡ್ ಬಾರಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಇಂದು ಬೆಂಗಳೂರಿನಲ್ಲಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನ ಉದ್ಘಾಟನೆ ಮಾಡಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಇದು ಬ್ರ್ಯಾಂಡ್ ಬೆಂಗಳೂರು ಆಗುತ್ತದೊ, ಬ್ಯಾಂಡ್ ಬೆಂಗಳೂರು ಆಗುತ್ತದೊ ಗೊತ್ತಿಲ್ಲ. ಬೆಂಗಳೂರನ್ನು ಸ್ವಚ್ಛ ಬೆಂಗಳೂರನ್ನಾಗಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಒಂದು ಕಾಲ ಇತ್ತು. ಭೂಮಿ ಇದ್ದವರು ಜಗತ್ತು ಆಳುತ್ತಿದ್ದರು. ನಂತರ ಹಣ ಇದ್ದವರು ಜಗತ್ತು ಆಳುತ್ತಿದ್ದರು. ಈಗ 21 ನೇ ಶತಮಾನ, ಇದು ಜ್ಞಾನದ ಯುಗ. ಜ್ಞಾನ ಎಲ್ಲಿದೆಯೋ ಅವರು ಜಗತ್ತನ್ನು ಆಳುತ್ತಾರೆ. ಅನೇಕ ವಿದೇಶಿಗರು ಭಾರತಕ್ಕೆ ಬಂದರೆ ಮೊದಲು ಬೆಂಗಳೂರಿಗೆ ಬರುತ್ತಾರೆ. ಅವರು ಬಂದು ವಿಧಾನಸೌಧಕ್ಕೆ ಬರುವುದಿಲ್ಲ. ಇನ್ಫೊಸಿಸ್ ಹಾಗೂ ವಿಪ್ರೋ ಕಡೆಗೆ ಹೋಗುತ್ತಾರೆ ಎಂದು ತಿಳಿಸಿದರು.