ಇಂಫಾಲ್, ಆ.11(DaijiworldNews/AA): ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ತೆಂಗೌಪಾಲ್ ಜಿಲ್ಲೆಯಲ್ಲಿ ಒಂದೇ ಸಮುದಾಯದ ಉಗ್ರಗಾಮಿಗಳು ಮತ್ತು ಗ್ರಾಮದ ಸ್ವಯಂಸೇವಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಮೊಲ್ನೊಮ್ ಪ್ರದೇಶದಲ್ಲಿ ಶುಕ್ರವಾರ ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ (ಯುಕೆಎಲ್ಎಫ್)ನ ಉಗ್ರರು ಮತ್ತು ಮೂವರು ಗ್ರಾಮ ಸ್ವಯಂಸೇವಕರ ನಡುವೆ ಘರ್ಷಣೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರಗಾಮಿ ಮತ್ತು ಎಲ್ಲಾ ಮೂವರು ಸ್ವಯಂಸೇವಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಹತ್ಯೆಗೆ ಪ್ರತೀಕಾರವಾಗಿ, ಗ್ರಾಮದ ಸ್ವಯಂಸೇವಕರು ಯುಕೆಎಲ್ಎಫ್ ಸ್ವಯಂಘೋಷಿತ ಅಧ್ಯಕ್ಷ ಎಸ್.ಎಸ್. ಹಾವ್ಕಿಪ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬಳಿಕ ಈ ಸಂಬಂಧ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಇನ್ನು ಪಲ್ಲೆಲ್ ಪ್ರದೇಶದಲ್ಲಿ ಲೆವಿ ನಿಯಂತ್ರಣದ ವಿವಾದದಿಂದ ಗುಂಡಿನ ಚಕಮಕಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಘರ್ಷಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಬಿಡುಗಡೆಗೊಳಿಸಿಲ್ಲ.