ಬೆಂಗಳೂರು, ಆ.09(DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಎಂಬುವರ ಖಾಸಗಿ ದೂರು ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಕಾಯ್ದಿರಿಸಿ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿದೆ.
ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಅಂದು ಆದೇಶ ಸಾಧ್ಯತೆ ಇದೆ. ಈ ವೇಳೆ ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದರು.
ಸಿದ್ದರಾಮಯ್ಯ ಡಿಸಿಎಂ ಆದಾಗ ಮಾಲೀಕರೇ ಅಲ್ಲದ ವ್ಯಕ್ತಿ ಪರವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಈ ಜಮೀನಿನಲ್ಲಿ ದೇವನೂರು ಬಡಾವಣೆ ರಚನೆಯಾಗಿದೆ. 2004ರಲ್ಲಿ ಮುಖ್ಯಮಂತ್ರಿ ಪತ್ನಿಯ ಸಹೋದರ ದೇವರಾಜುನಿಂದ ಜಮೀನು ಖರೀದಿಸಲಾಗಿದೆ. ಆಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಖರೀದಿಗೆ ಹಣದ ಮೂಲದ ಬಗ್ಗೆ ಪ್ರಶ್ನೆಯಿದೆ. ದೇವನೂರು ಬಡಾವಣೆಯಲ್ಲಿ ಈಗಲೂ ಖಾಲಿ ನಿವೇಶನಗಳಿವೆ. ಆದರೆ ದುಬಾರಿ ಬೆಲೆಯ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದ್ದಾರೆ.
ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. ಹಕ್ಕಿದ್ದಿದ್ದರೂ ಗರಿಷ್ಠ 4800 ಚದರಡಿ ಜಾಗ ಮಾತ್ರ ಪಡೆಯಬಹುದಿತ್ತು. ಆದರೆ 14 ಸೈಟ್ ಪಡೆದಿರುವುದು ಕಾನೂನುಬಾಹಿರ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಸ್ವಾಧೀನವಾದ ಜಮೀನಿನಲ್ಲಿ ಮಾತ್ರ 4800 ಅಡಿ ನಿವೇಶನ ಪಡೆಯಬಹುದು ಎಂದು ವಾದ ಮಂಡಿಸಿದ್ದಾರೆ.