ದೆಹಲಿ, ಆ.09(DaijiworldNews/AA): ಸಂಸತ್ತಿನಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಹಾಗೂ ಸಮಾಜವಾದಿ ಸಂಸದೆ ಜಯಾ ಬಚ್ಚನ್ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಜಯಾ ಬಚ್ಚನ್ ಅವರಿಗೆ ಬೆಂಬಲಿಸಿ ಸದನದಿಂದ ಹೊರನಡೆದಿವೆ.
ಶುಕ್ರವಾರ ಸಂಸತ್ತಿನಲ್ಲಿ "ಜಯಾ ಅಮಿತಾಭ್ ಬಚ್ಚನ್" ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಯಾ. "ನನ್ನನ್ನು ಕ್ಷಮಿಸಿ, ಆದರೆ ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ, ಸರ್" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧನ್ಖರ್, "ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ ನೀವು ಇಲ್ಲಿನ ಶಿಷ್ಟಾಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಕಿಡಿಕಾರಿದ್ದಾರೆ.
ಈ ವಾರದ ಆರಂಭದಲ್ಲಿ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದರು. ಅದಕ್ಕೆ ಜಯಾ ಬಚ್ಚನ್ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದರು. ಕಳೆದ ವಾರ ಕೂಡ ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ಕಾರಣ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದ್ದರು.
ಸಭಾತ್ಯಾಗದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಾ, "ಇದು ತುಂಬಾ ಅವಮಾನಕರ ಅನುಭವ" ಎಂದು ತಿಳಿಸಿದ್ದರು. ಇನ್ನು ಈ ಸಂಸತ್ತಿನ ಅಧಿವೇಶನದಲ್ಲಿ ಎರಡು ಬಾರಿ ಜಯಾ ಬಚ್ಚನ್ ಅವರನ್ನು 'ಜಯಾ ಅಮಿತಾಭ್ ಬಚ್ಚನ್' ಎಂದು ಸಂಬೋಧಿಸಲಾಗಿದೆ.