ನವದೆಹಲಿ, ಆ.08(DaijiworldNews/AK): ಇಸ್ಲಾಮಿಕ್ ಸ್ಟೇಟ್ ಮಾಡ್ಯೂಲ್ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಶುಕ್ರವಾರ (ಆ.9) ಮುಂಜಾನೆ ಬಂಧಿಸಿದೆ.
ಪುಣೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಲಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್ನ ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸ್ಕೆಚ್ ಮಾಡಿದ್ದನು ಎಂದು ಆರೋಪಿಸಲಾಗಿದೆ.
ಬಂಧನದ ಬಳಿಕ ಅಲಿಯ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುಣೆ ಐಸಿಸ್ ಮಾಡ್ಯೂಲ್ನ ಹಲವಾರು ಸದಸ್ಯರನ್ನು ಈ ಹಿಂದೆ ಪುಣೆ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.
ಮಹಾರಾಷ್ಟ್ರದ ಪುಣೆಯಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ರಾಸಾಯನಿಕಗಳು ಮತ್ತು ಐಸಿಸ್ಗೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2023 ರಲ್ಲಿ ಎನ್ಐಎ ಒಟ್ಟು 11 ಆರೋಪಿಗಳನ್ನು ಬಂಧಿಸಿದೆ.
ಎಲ್ಲಾ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ನ ಸದಸ್ಯರಾಗಿದ್ದರು. ಹಾಗೂ ಎನ್ಐಎ ಪ್ರಕಾರ, ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ದೊಡ್ಡ ಪಿತೂರಿಯ ಭಾಗವಾಗಿ ಪುಣೆ ಮತ್ತು ಸುತ್ತಮುತ್ತ ಭಯೋತ್ಪಾದನೆಯ ಯೋಜನೆಗಳಲ್ಲಿ ಭಾಗಿಯಾಗಿದ್ದರು.