ಬೆಂಗಳೂರು, ಆ.07(DaijiworldNews/AA): ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರಾವಾಗಿದ್ದು ನನಗೆ ನೀವು ಶೋಕಾಸ್ ನೋಟಿಸ್ ಕೊಟ್ಟಿರುವುದು ಕ್ರಮಬದ್ದವಲ್ಲ ಎಂದು ಸಿಎಂ ಸಿದ್ದರಾಮಯ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಪತ್ರದ ಮೂಲಕ ಉತ್ತರಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಜಾರಿಯಾಗಿರುವ ಶೋಕಾಸ್ ನೋಟಿಸ್ ಗೆ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರವಾಗಿದ್ದು ನನಗೆ ನೀವು ನೋಟಿಸ್ ಕೊಟ್ಟಿರುವುದು ಕ್ರಮಬದ್ದವಲ್ಲ. ನಾನು ಅಧಿಕಾರದಲ್ಲಿದ್ದಾಗ ಸ್ವಜನ ಪಕ್ಷಪಾತ ಮಾಡಿಲ್ಲ ಮತ್ತು ಕಾನೂನು ಬಾಹಿರವಾಗಿ ಯಾವುದೇ ನಿರ್ಧಾರಗಳನ್ನ ಕೈಗೊಂಡಿಲ್ಲ. ದೂರುದಾರರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದೆ ಎಂದು ತಿಳಿಸಿದ್ದಾರೆ.
ಮುಡಾ ನಿವೇಶನ ಪಡೆದಿರುವ ಸಂಬಂಧ ಅಧಿಕಾರ ದುರ್ಬಳಕೆ ಮಾಡಿಲ್ಲ. ನ್ಯಾಯ ಸಮ್ಮತವಾಗಿ ನನ್ನ ಕುಟುಂಬ ನಿವೇಶನ ಪಡೆದಿದ್ದು ಯಾವುದೇ ರೀತಿಯಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿಲ್ಲ. ಮುಖ್ಯ ಕಾರ್ಯದರ್ಶಿ ನೀಡಿರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ನಾನು ಲೋಪವೆಸಗಿಲ್ಲ. ಆಧಾರ ರಹಿತ ಮಾಹಿತಿ ಆಧರಿಸಿ ನೋಟಿಸ್ ನೀಡಿರುವುದು ಸಮಂಜಸವಲ್ಲ. ದೂರುದಾರರ ಪೂರ್ವಾಪರಗಳ ಬಗ್ಗೆಯೂ ರಾಜ್ಯಕ್ಕೆ ಗೊತ್ತಿದೆ. ಪೂರ್ವಾಪರತೆಗಳನ್ನು ಅರೆಯದೇ ನೋಟಿಸ್ ನೀಡಿರುವುದು ಸರಿಯಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ಅನುಮತಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.