ಮೈಸೂರು, ಆ.06(DaijiworldNews/AA): ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು ಇದುವರೆಗೂ ಏಕೆ ಬಂಧಿಸಿಲ್ಲ ಎಂದು ಮಾಜಿ ಸಚಿವ ಹಾಗು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರ್ಗಾವಣೆ ಆದ ಏಳು ದಿನಗಳಲ್ಲೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗು ಅವರ ಪುತ್ರನ ಕಿರುಕುಳದಿಂದ ಬೇಸತ್ತು ಪೊಲೀಸ್ ಅಧಿಕಾರಿ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೃಹ ಸಚಿವರೊಬ್ಬರು ಪ್ರಾಮಾಣಿಕರಾಗಿದ್ದರೇ ಮಾತ್ರ ಸಾಲುವುದಿಲ್ಲ. ಅವರ ಸುತ್ತಲೂ ಇರುವಂತಹ ಪ್ರಾಮಾಣಿಕರಾಗಿರಬೇಕು. ಈ ಹಿಂದೆ ಯಾವುದೇ ಸರ್ಕಾರ ಪೊಲೀಸ್ ಇಲಾಖೆಯನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೆಚ್ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ವಾಕ್ ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ. ಶಿವಕುಮಾರ್ ನೀವು ಸಿಎಂ ಆಗಿ ಯಾರು ಬೇಡ ಅಂದ್ರು. ಹೈಕಮಾಂಡ್ ನಲ್ಲಿ ಏನು ತೀರ್ಮಾನ ಆಗಿದೆಯೋ ಗೊತ್ತಿಲ್ಲ. ಏನೋ ನಮ್ಮವ್ರು ಒಬ್ಬರು ಮುಖ್ಯಮಂತ್ರಿ ಆಗಲಿ ಎಂದು ಜನ ನಿಮಗೆ 136 ಸೀಟು ನೀಡಿದ್ರೆ, ಮುಂದೆ ನೀವೂ ಸಿಎಂ ಆದರೆ ಸಂತೋಷ. ಸಿಎಂ ಆಗಬೇಡಿ ಅನ್ನೋಕೆ ನಾವ್ಯಾರು? ಅದನ್ನು ಬಿಟ್ಟು ದೇವೇಗೌಡರ ಕುಟುಂಬದ ಮೇಲೆ ಯಾಕೆ ದ್ವೇಷ ಕಾರುತ್ತೀರಾ? ಪರಸ್ಪರ ಕಿತ್ತಾಡೋದನ್ನು ಈ ಕೂಡಲೇ ಬಿಡಿ.