ನವದೆಹಲಿ, ಆ 6 (DaijiworldNews/MS): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಫಿಜಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ವಲಯದ ಕಾರ್ಯದರ್ಶಿ ಜೈ ದೀಪ್ ಮಜುಂದಾರ್ ದೆಹಲಿಯಲ್ಲಿಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ಅವರು, ಇಂದು ಬೆಳಗ್ಗೆ ಸುವ ತಲುಪಿದ್ದು, ಅಲ್ಲಿ ಅವರಿಗೆ ಮಿಲಿಟರಿ ಪಡೆಗಳು ಗೌರವ ರಕ್ಷೆ ನೀಡುವ ಮೂಲಕ ಸ್ವಾಗತಿಸಿದವು. ವಿಮಾನ ನಿಲ್ದಾಣದಿಂದ ಅವರು ತೆರಳುವ ಮಾರ್ಗದುದ್ದಕ್ಕೂ ಶಾಲಾ ಮಕ್ಕಳು ಸಾಲಾಗಿ ನಿಂತು, ರಾಷ್ಟ್ರಪತಿಗಳತ್ತ ಕೈಬೀಸಿ ಸ್ವಾಗತಿಸಿದರು ಎಂದು ಹೇಳಿದ್ದಾರೆ.
ಫಿಜಿ ಅಧ್ಯಕ್ಷರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಇಬ್ಬರೂ ನಾಯಕರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಬಲವರ್ಧನೆ, ಪರಸ್ಪರ ವಿಶ್ವಾಸಾರ್ಹತೆ ವೃದ್ಧಿ ನಿಟ್ಟಿನಲ್ಲಿ ಹಲವು ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಫಿಜಿ ಅಧ್ಯಕ್ಷರು ರಾಷ್ಟ್ರಪತಿಗಳಿಗೆ ದಿಆರ್ಡರ್ ಆಫ್ ಫಿಜಿ ಅತ್ಯುನ್ನತ ಗೌರವವನ್ನು ಸಲ್ಲಿಸಿದರು ಮತ್ತು ರಾಷ್ಟ್ರಪತಿಗಳು ಫಿಜಿ ಸಂಸತ್ ಉದ್ದೇಶಿಸಿ, ಭಾಷಣ ಮಾಡಿದರು ಎಂದು ವಿವರ ನೀಡಿದ್ದಾರೆ.