ಚನ್ನಪಟ್ಟಣ,ಆ.05(DaijiworldNews/AK): ಕಂಡವರ ಆಸ್ತಿಗಳನ್ನು ಸರಣಿಯಾಗಿ ಸ್ವಾಧೀನ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಮಾಡುತ್ತಿರುವ ಅನಾಚಾರ, ಅಕ್ರಮಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸವಾಲು ಹಾಕಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಆ ನಿವೇಶನಕ್ಕೆ ಸಂಪೂರ್ಣವಾಗಿ ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಅವರು ಒಂದು ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ, ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯಪ್ರವೇಶ ಮಾಡುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಅವರನ್ನು ಕರೆಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಇಂಥ ವ್ಯಕ್ತಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಅವರ ಹಾಗೆ ನಾವು ಮಾಡಿಲ್ಲ ಎಂದು ಹೆಚ್ಡಿಕೆ ವಾಗ್ದಾಳಿ ಮಾಡಿದ್ದಾರೆ.
ಗನ್ ಇಟ್ಟು ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡವರು ನೀವು, ಅನ್ಯಾಯವಾಗಿ ಕಂಡೋರ ಆಸ್ತಿಯನ್ನು ಕಬ್ಜ ಮಾಡಿದವರು ನೀವು.. ಇಂಥ ಕೆಟ್ಟ ಹಿನ್ನೆಯ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ಬನ್ನಿ ಪ್ರಮಾಣ ಮಾಡೋಣ. ಅಜ್ಜಯನ ಮುಂದೆ ಆಗಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಪ್ರಮಾಣ ಮಾಡೋಣ.
ನೀವೇ ವಿಧಾನಸೌಧಕ್ಕೆ ಬನ್ನಿ...... ಅಲ್ಲಿಗೂ ಬರಲು ನಾನು ತಯಾರಿದ್ದೇನೆ. ಬನ್ನಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದರು.