ನವದೆಹಲಿ, ಆ.05(DaijiworldNews/AA): ಹಳೇ ರಾಜೀಂದರ್ ನಗರದಲ್ಲಿನ ನೆಲಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ಗೆ ನೀರು ನುಗ್ಗಿ ಮೂವರು ಐಎಎಸ್ ಅಭ್ಯರ್ಥಿಗಳು ಸಾವನ್ನಪ್ಪಿದ ಘಟನೆಯ ಸಂಬಂಧ, ಇಂದು ಸುಪ್ರೀಂ ಕೋರ್ಟ್ ಸ್ವಯಂ ಪ್ರೀರಿತ ದೂರು ದಾಖಲಿಸಿಕೊಂಡಿದೆ.
ಸ್ವರ್ಯ ಪ್ರೇರಿತ ದೂರು ದಾಖಲಿಸಿಕೊಳ್ಳುವುದರ ಜೊತೆಗೆ ವಿವರಣೆ ಕೇಳಿ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಇದೊಂದು ಎಲ್ಲರ ಕಣ್ಣು ತೆರೆಸಬೇಕಾದ ಘಟನೆ ಎಂದು ಪೀಠ ತಿಳಿಸಿದೆ.
'ಕೋಚಿಂಗ್ ಸೆಂಟರ್ಗಳು ಸಾವಿನ ಚೇಂಬರ್ಗಳಾಗಿ ಮಾರ್ಪಟ್ಟಿವೆ. ಸುರಕ್ಷತಾ ನಿಯಮಗಳು ಮತ್ತು ಗೌರವಯುತ ಜೀವನಕ್ಕಾಗಿ ಮೂಲಭೂತ ಮಾನದಂಡಗಳ ಸಂಪೂರ್ಣ ಪಾಲನೆ ಮಾಡದಿದ್ದರೆ ಕೋಚಿಂಗ್ ಸಂಸ್ಥೆಗಳು ಆನ್ಲೈನ್ನಲ್ಲಿ ಕಾರ್ಯನಿರ್ವಹಿಸಬಹುದು. ಕೋಚಿಂಗ್ ಸೆಂಟರ್ಗಳು ದೇಶದ ವಿವಿಧ ಭಾಗಗಳಿಂದ ಬರುವ ಆಕಾಂಕ್ಷಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ' ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಉಜ್ವಲ್ ಭುಯನ್ ಅವರಿದ್ದ ಪೀಠವು ತಿಳಿಸಿದೆ.
ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಈಗಾಗಲೇ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.