ಬೆಂಗಳೂರು, ಆ.03(DaijiworldNews/AA): ಕಾಂಗ್ರೆಸ್ನ ಭ್ರಷ್ಟಾಚಾರದಿಂದಾಗಿ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಿಎಸ್ಐ ಸಾವನ್ನಪ್ಪಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇನ್ನು ಸಿಎಂ ಸ್ಥಾನದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬಿಜೆಪಿಯನ್ನು ಜನರು ವಿಧಾನಸಭೆಗೆ ಕಳುಹಿಸಿರುವುದೇ ಭ್ರಷ್ಟಾಚಾರವನ್ನು ಮಟ್ಟ ಹಾಕಲು. ಸಿಎಂ ಸಿದ್ದರಾಮಯ್ಯ ಅವರು ಮುಡಾದಲ್ಲಿ 14 ಸೈಟು ದೋಚಿದ ಬಳಿಕ ನಂತರ ಅವರ ಬೆಂಬಲಿಗರು 300 ಸೈಟು ಕೊಳ್ಳೆ ಹೊಡೆದಿದ್ದಾರೆ. ಅವರ ಪಕ್ಷದವರೇ 3-4 ಸಾವಿರ ಕೋಟಿ ರೂ. ಲೂಟಿಯಾಗಿದೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ದಲಿತರ ಜಮೀನಿನ ನಿವೇಶನಗಳನ್ನು ಸಿಎಂ ಪಡೆದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯಪಾಲರಿಗೆ ನೋಟಿಸ್ ಕೊಡಲು ಅಧಿಕಾರವಿದೆಯಾ ಎಂದು ಇವರು ಪ್ರಶ್ನಿಸುತ್ತಾರೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಖಾಸಗಿ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಕ್ರಮ ವಹಿಸಿದ್ದರು. ಕಾಂಗ್ರೆಸ್ ನಾಯಕರು ಕೇವಲ ನೋಟಿಸ್ಗೆ ಗಢಗಢ ಎನ್ನುತ್ತಿದ್ದಾರೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ. ಇಂತಹ ಕಾಂಗ್ರೆಸ್ನ ಭ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಹೋರಾಟ ನಡೆಸುತ್ತಿದ್ದೇವೆ. ಕೆಂಗೇರಿಯಲ್ಲಿ ಭೂ ಸ್ವಾಧೀನ ಮಾಡಿ ಪರಿಹಾರವಾಗಿ ಎಂ.ಜಿ.ರಸ್ತೆಯಲ್ಲಿ ನಿವೇಶನ ನೀಡಿದರೆ ಅದು ನ್ಯಾಯವೇ? ನೂರಾರು ಕಾನೂನು ಪ್ರಶ್ನೆಗಳು ನಮ್ಮ ಮುಂದಿದೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದಲ್ಲಾದ ಹಗರಣದ ವಿರುದ್ಧ ಸದನದಲ್ಲಿ ಮಾತನಾಡಿದ್ದೇವೆ. ಆದರೆ ಮುಡಾ ಹಗರಣದ ಬಗ್ಗೆ ಮಾತನಾಡಲು ಅವಕಾಶ ನೀಡಿಲ್ಲ. ಅದಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ವಿರೋಧ ಪಕ್ಷವಾಗಿಯೇ ಪ್ರಶ್ನೆ ಕೇಳಬೇಕಿತ್ತು. ಈಗ ನಾವು ಹೋರಾಟ ಆರಂಭಿಸಿದ ಬಳಿಕ, ರೈಲು ಹೋದ ಬಳಿಕ ಟಿಕೆಟ್ ಪಡೆದಂತೆ ಹಿಂದಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಜನರು ಬೆಲೆ ನೀಡುವುದಿಲ್ಲ. ಎರಡು ಹಗರಣಗಳ ಬಗ್ಗೆ ಮೊದಲು ಕಾಂಗ್ರೆಸ್ ಜನರಿಗೆ ಉತ್ತರಿಸಲಿ. ನಂತರ ತಮ್ಮ ಹಿಂದಿನ ಸರ್ಕಾರದ ವಿರುದ್ಧ ತನಿಖೆ ನಡೆಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.