ನವದೆಹಲಿ, ಜು 31(DaijiworldNews/MS): ರಾಜ್ಯಸಭೆ ಕಲಾಪ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಜಗದೀಪ್ ಧನಕರ್ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.ಈ ಮಧ್ಯೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ವಿರುದ್ಧ ಬಿಜೆಪಿಯ ಘನಶ್ಯಾಮ್ ತಿವಾರಿ ಮಾಡಿದ್ದ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಶಿವನ ಹೆಸರಿಟ್ಟುಕೊಂಡಿರುವ ತಮ್ಮ ಕುಟುಂಬ ರಾಜಕಾರಣದಲ್ಲಿದೆ ಎಂದು ನಿನ್ನೆಯ ಕಲಾಪದಲ್ಲಿ ಬಿಜೆಪಿಯ ಘನಶ್ಯಾಮ್ ತಿವಾರಿ ಅವರು ಆರೋಪಿಸಿದ್ದರು. ಮಾತು ಮುಂದುವರೆಸಿದ ಮಲ್ಲಿಕಾರ್ಜುನ ಖರ್ಗೆ, ತಮ್ಮ ಕುಟುಂಬದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಮೊದಲ ವ್ಯಕ್ತಿ ನಾನೇ ಆಗಿದ್ದು ನನ್ನ ಪೋಷಕರು ಯಾರೂ ರಾಜಕೀಯದಲ್ಲಿ ಇರಲಿಲ್ಲ. ಒಂದು ವೇಳೆ ನನ್ನ ಇಡೀ ಕುಟುಂಬ ರಾಜಕಾರಣದಲ್ಲಿದ್ದರೆ ಅದನ್ನು ಅವರು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.
ಖರ್ಗೆಯವರ ಬಗ್ಗೆ ಇಂತಹ ಮಾತುಗಳನ್ನು ಸದನದ ಸದಸ್ಯರು ಹೇಳಿದ್ದಲ್ಲಿ ಅದನ್ನು ಕಡತದಿಂದ ತೆಗೆದುಹಾಕಲಾಗುವುದೆಂದು ಸಭಾಪತಿ ಜಗದೀಪ್ ಧನ್ ಕರ್ ಭರವಸೆ ನೀಡಿದರು. ಅಲ್ಲದೇ, ಮಲ್ಲಿಕಾರ್ಜುನ ಖರ್ಗೆಯವರು ನಡೆದು ಬಂದ ರಾಜಕೀಯ ಹಾದಿಯನ್ನು ಶ್ಲಾಘಿಸಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮತ್ತು ನಿಮ್ಮಂಥವರು ಸದನದಲ್ಲಿ ಇರುವುದು ನಮ್ಮ ಸೌಭಾಗ್ಯವೆಂದು ಸಂತಸ ವ್ಯಕ್ತಪಡಿಸಿದರು.