ನವದೆಹಲಿ, ಜು.31(DaijiworldNews/AA): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಪಾದಯಾತ್ರೆ ವಿಚಾರದಲ್ಲಿ ಜೆಡಿಎಸ್ ನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಜೆಡಿಎಸ್ ಬೆಂಬಲ ಇಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಬೆಂಬಲ ನೀಡದೇ ಇರುವ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಮಂಗಳವಾರದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಪಾದಯಾತ್ರೆ ಬಗ್ಗೆ ಬಿಜೆಪಿಯವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂಬುದು ನಮ್ಮ ನಿಲುವು. ಹೀಗಾಗಿ ಅದರಿಂದ ಹಿಂದೆ ಸರಿದಿದ್ದೇವೆ. ಆ ಭಾಗದ ಜನರ ಭಾವನೆ ಮುಖ್ಯ. ಹಾಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ತಿಳಿಸಿದರು.
ಈ ಹಿಂದೆ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ವೇಳೆಯೂ ಬಿಜೆಪಿ ಕುರಿತು ಕುಮಾರಸ್ವಾಮಿ ತುಸು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇವಲ 2 ಸೀಟಿಗಾಗಿ ಇಷ್ಟೆಲ್ಲ ಒದ್ದಾಡಬೇಕಾ ಎಂದು ಅವರು ನೀಡಿದ್ದ ಹೇಳಿಕೆ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.