ನವದೆಹಲಿ, ಜು.30(DaijiworldNews/AA): ಬಿಜೆಪಿಯು ಓರ್ವ ಮುಖ್ಯ ಸಚೇತಕ ಹಾಗೂ 16 ಜನರನ್ನು ಸಚೇತಕರನ್ನಾಗಿ ನೇಮಕ ಮಾಡಿದೆ. ನೇಮಕಗೊಂಡ 16 ಮಂದಿ ಸಚೇತಕರ ಪೈಕಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಸ್ಥಾನ ದೊರೆತಿದೆ.
ಲೋಕಸಭೆಯ ಮುಖ್ಯ ಮತ್ತು ಸಚೇತಕರನ್ನು ನೇಮಕ ಮಾಡಿ ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿ ಶಿವಶಕ್ತಿನಾಥ್ ಭಕ್ಷಿ ಅವರು ಜುಲೈ 29ರಂದು ಆದೇಶ ಹೊರಡಿಸಿದ್ದರು. ಡಾ ಸಂಜಯ್ ಜೈಸ್ವಾಲ್ ಅವರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ದರೆ, ಇನ್ನುಳಿದ 16 ಜನರನ್ನು ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಸಚೇತಕ ಸ್ಥಾನ ದೊರೆಯುವ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಏಳಿಗೆ ಕಂಡಿದ್ದಾರೆ. ಇನ್ನು ತಮ್ಮನ್ನು ಸಚೇತಕರನ್ನಾಗಿ ನೇಮಿಸಿದ ಬಿಜೆಪಿಯ ಸಂಸದೀಯ ಮಂಡಳಿಗೆ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಧನವಾದ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.