ಬೆಂಗಳೂರು, ,ಜು.29(DaijiworldNews/AK): ವಿಪಕ್ಷಗಳಿಗೆ ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನು, ಪಾದಯಾತ್ರೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದರು.
ನಗರದಲ್ಲಿ ಇಂದು ನಡೆದ ಮೈಸೂರು ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಉಪ ಮುಖ್ಯಮಂತ್ರಿ ಶಿವಕುಮಾರರೇ ನಿಮ್ಮ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ನುಡಿದರು.
ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಹಣವನ್ನು ಬಳಿಕ ಅದನ್ನು ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದರು. ಹೆಂಡ ಖರೀದಿಯೂ ಮಾಡಿದ್ದನ್ನು ಇ.ಡಿ. ಉಲ್ಲೇಖಿಸಿದೆ ಎಂದು ಗಮನ ಸೆಳೆದರು.
ಬಿಜೆಪಿ, ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡಾ ಹಗರಣ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ. ಮೂಡಾದಲ್ಲಿ ಸಿದ್ದರಾಮಯ್ಯನವರ ಕುಟುಂಬ ಪಡೆದ 14 ನಿವೇಶನಗಳು ಮೂಡಾಕ್ಕೆ ವಾಪಸ್ ಬಂದು ಬಡವರಿಗೆ ಹಂಚಿಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳನ್ನು ಮನಸೋ ಇಚ್ಛೆ ಕೊಡಲಾಗಿದೆ. ಸ್ವತಃ ಸಿದ್ದರಾಮಯ್ಯನವರೇ ನೇಮಿಸಿದ ಮೂಡಾ ಅಧ್ಯಕ್ಷ ಮರಿಗೌಡರೇ ಇದನ್ನು ಬಾಯಿ ಬಿಟ್ಟಿದ್ದಾರೆ ಎಂದು ಅವರು ವಿವರಿಸಿದರು.