ನವದೆಹಲಿ,ಜು.29(DaijiworldNews/AA): ಒಂದೇ ಕುಟುಂಬದ ಇಬ್ಬರು ಒಟ್ಟಿಗೆ ಯುಪಿಎಸ್ ಸಿ ಪಾಸ್ ಮಾಡುವುದು ನಿಜಕ್ಕೂ ಅಪರೂಪದಲ್ಲಿ ಅಪರೂಪ. ಅಕ್ಕ-ತಂಗಿ, ಅಣ್ಣ-ತಮ್ಮ ಜೋಡಿಗಳು ಒಟ್ಟಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಒಟ್ಟಿಗೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಒಂದೇ ಕುಟುಂಬದಲ್ಲಿ ಇಬ್ಬಿಬ್ಬರು ಉನ್ನತ ಅಧಿಕಾರಿಗಳಾಗುವುದು ನಿಜಕ್ಕೂ ಆ ಕುಟುಂಬಕ್ಕೆ ಹೆಮ್ಮೆಯ ಸಂಗತಿ. ಆ ರೀತಿ ತಮ್ಮ ಕುಟುಂಬಕ್ಕೆ ಗರಿಮೆ ತಂದ ಸೋದರ, ಸೋದರಿಯರ ಯಶೋಗಾಥೆ ಇಲ್ಲಿದೆ.
ಯುಪಿಯ ಆಗ್ರಾದ ಇಬ್ಬರು ಸಹೋದರಿಯರಾದ ಸಿಮ್ರಾನ್ ಮತ್ತು ಸೃಷ್ಟಿ 2020 ರಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಒಟ್ಟಿಗೆ ಭೇದಿಸಿದ್ದಾರೆ. ಹಿರಿಯ ಸಹೋದರಿ ಸಿಮ್ರಾನ್ 474 ನೇ ರ್ಯಾಂಕ್ ಮತ್ತು ಕಿರಿಯ ಸಹೋದರಿ ಸೃಷ್ಟಿ 373 ನೇ ರ್ಯಾಂಕ್ ಪಡೆದಿದ್ದಾರೆ.
ರಾಜಸ್ಥಾನದ ಜುಂಜುನು ನಿವಾಸಿಗಳಾದ ಕುಮಾವ್ ಸಹೋದರರಾದ ಪಂಕಜ್ ಮತ್ತು ಅಮಿತ್ 2019 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಒಟ್ಟಿಗೆ ಭೇದಿಸಿದ್ದಾರೆ. ಯುಪಿಎಸ್ ಸಿಯಲ್ಲಿ ಪಂಕಜ್ ಕುಮಾವತ್ 423ನೇ ಹಾಗೂ ಅಮಿತ್ 424ನೇ ರ್ಯಾಂಕ್ ಪಡೆದಿದ್ದಾರೆ.ಸಹೋದರರಿಬ್ಬರೂ ಕೋಚಿಂಗ್ ಇಲ್ಲದೆಯೇ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಪಂಕಜ್ ಮತ್ತು ಅಮಿತ್ 2018ರಲ್ಲೂ ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದರು. ಇದರಲ್ಲಿ ಪಂಕಜ್ 443ನೇ ಹಾಗೂ ಅಮಿತ್ 600ನೇ ರ್ಯಾಂಕ್ ಬಂದಿದ್ದರು. ನಂತರ ಇಬ್ಬರೂ ಮತ್ತೆ ಪರೀಕ್ಷೆ ಬರೆಯಲು ನಿರ್ಧರಿಸಿದರು.
ರಾಜಸ್ಥಾನದ ದೌಸಾ ಜಿಲ್ಲೆಯ ನಿವಾಸಿಗಳಾದ ಅಂಜಲಿ ಮೀನಾ ಮತ್ತು ಅನಾಮಿಕಾ ಮೀನಾ ಅವರು ಒಟ್ಟಿಗೆ ಯುಪಿಎಸ್ ಸಿಗೆ ತಯಾರಿ ನಡೆಸಿದ್ದರು. 2019 ರಲ್ಲಿ, ಇಬ್ಬರೂ ಮೊದಲ ಪ್ರಯತ್ನದಲ್ಲಿಯೇ ಭೇದಿಸಿದ್ದಾರೆ. ಅನಾಮಿಕಾಗೆ 116ನೇ ಹಾಗೂ ಅಂಜಲಿಗೆ 494ನೇ ರ್ಯಾಂಕ್ ಬಂದಿದ್ದು, ಆಕೆಯ ತಂದೆ ರಮೇಶ್ ಚಂದ್ರ ಮೀನಾ ತಮಿಳುನಾಡು ಕೇಡರ್ ನ ಐಎಎಸ್ ಅಧಿಕಾರಿ.
ಆಗ್ರಾದ ಜೈನ್ ಸಹೋದರಿಯರಾದ ಅಂಕಿತಾ ಮತ್ತು ವೈಶಾಲಿ ಒಟ್ಟಿಗೆ UPSC ಅನ್ನು ಭೇದಿಸಿದ್ದಾರೆ. ಈ ಜೋಡಿ UPSC ಟಾಪರ್ ಆಗಿತ್ತು. ಅಂಕಿತಾ ಜೈನ್ ಅಖಿಲ ಭಾರತ 3ನೇ ರ್ಯಾಂಕ್ ಪಡೆದರೆ, ವೈಶಾಲಿ ಜೈನ್ 21ನೇ ರ್ಯಾಂಕ್ ಪಡೆದಿದ್ದಾರೆ.