ರಾಮನಗರ, ಜು.27(DaijiworldNews/AA): ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಮನಗರದ ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ. ಜಿಲ್ಲೆಯ ಜನತೆ ಇದರ ವಿರುದ್ಧವಾಗಿದ್ದಾರೆ. ರಾಜಕೀಯ ಉದ್ದೇಶಕ್ಕೆ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ಹೆಸರು ಬದಲಾವಣೆಗೆ ಸಂಪುಟ ಅನುಮೋದನೆ ಕುರಿತು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ರಾಮನ ಪಾದಸ್ಪರ್ಶದ ಪುಣ್ಯಕ್ಷೇತ್ರ. ರಾಮನಗರ ಜಿಲ್ಲೆ ಸ್ಥಾಪನೆ ಆದಾಗಾ ಯಾರೂ ಇದಕ್ಕೆ ನಕಾರ ಎತ್ತಲಿಲ್ಲ. ರಾಮನಗರ ಹೆಸರಿಗೆ ಯಾರೂ ವಿರೋಧ ಮಾಡಲಿಲ್ಲ ಎಂದು ಹೇಳಿದರು.
ಹೆಸರು ಬದಲಾವಣೆ ಆದರೆ ರಾಮನಗರದ ಜನರಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ರೆವೆನ್ಸೂ ದಾಖಲಾತಿ ಬದಲಾವಣೆ ಮಾಡಬೇಕು. ಸಾಕಷ್ಟು ಟೆಕ್ನಿಕಲ್ ಸಮಸ್ಯೆಗಳು ಹಾಗೂ ಜನತೆ ನಿತ್ಯ ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ದೊಡ್ಡಮಟ್ಟದ ಹೋರಾಟಕ್ಕೆ ಚರ್ಚೆ ಮಾಡುತ್ತಿದ್ದೇವೆ. ನಾಳೆ ಕೇಂದ್ರ ಸಚಿವ ಕುಮಾರಣ್ಣ ಹಾಗೂ ಬಿಜೆಪಿ ನಾಯಕರೊಂದಿಗೆ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಹೆಸರು ಬದಲಾವಣೆಗೆ ಹಾಸನದವರ ವಿರೋಧ ಎಂಬ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ಅಭಿಪ್ರಾಯ ತಿಳಿಯದೇ ಏಕಾಏಕಿ ಆದೇಶ ಮಾಡೋದು ಸರಿಯಲ್ಲ. ಈ ಬಗ್ಗೆ ರಾಮನಗರದ ಟೋಕನ್ ಶಾಸಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಗಾಳಿಯಲ್ಲಿ ಗುಂಡುಹೊಡೆಯೋದು ಬಿಟ್ಟು ಮೊದಲು ಜನರ ಕೆಲಸ ಮಾಡಲಿ ಎಂದು ವಾಗ್ದಾಳಿ ನಡೆಸಿದರು.