ಬೆಂಗಳೂರು, ಜು.26(DaijiworldNews/AA): ವಿರೋಧ ಪಕ್ಷದ ನಾಯಕರು ತಾವೇ ತೋಡಿದ ಬಾವಿಯಲ್ಲಿ ಬೀಳಲು ಅಣಿಯಾಗುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಅಧಿಕಾರಿಗಳಿಂದ ಅವ್ಯವಹಾರ ನಡೆದಿದ್ದು 89 ಕೋಟಿಗಳಷ್ಟಾದರೆ ಸದನದಲ್ಲಿ ವಿರೋಧ ಪಕ್ಷದ ನಾಯಕರು 187 ಕೋಟಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿದ ದುರುಪಯೋಗಪಡಿಸಿಕೊಳ್ಳಲಾಗಿದ್ದ ಹಣವನ್ನು ವಾಪಸ್ಸು ಪಡೆಯಲಾಗಿದೆ. ಎಸ್ಐಟಿ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದರೂ ಈಡಿ ಮತ್ತು ಸಿಬಿಐಗೆ ದೂರು ನೀಡಿದ್ದಾರೆ ಎಂದರು.
ಸದನದಲ್ಲಿ ಪ್ರಕರಣದ ಚರ್ಚೆಯಾಗುವಾಗ, ಆರ್ ಅಶೋಕ ಮತ್ತು ಪರಿಷತ್ ನಲ್ಲಿ ಸಿಟಿರವಿ ಅವರಿಗೆ ಮುಕ್ತವಾಗಿ ಮಾತಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಮುಖ್ಯಮಂತ್ರಿಯವರು ಮಾತಾಡಲು ಎದ್ದು ನಿಂತಾಗ ಅವರ ಪ್ರತಿಮಾತಿಗೆ ಕೊಕ್ಕೆ ಹಾಕುತ್ತಿದ್ದಾರೆ. ಈ ಕಾರಣಕ್ಕಾಗೇ ಮುಖ್ಯಮಂತ್ರಿಯವರು ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು ಎಂದು ತಿಳಿಸಿದರು.