ಉತ್ತರಪ್ರದೇಶ, ಜು. 26(DaijiworldNews/AK): ಎಂಎನ್ಸಿ ಉದ್ಯೋಗ ಬಿಟ್ಟು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅರಿಬಾ ಅವರ ಸಕ್ಸಸ್ ಸ್ಟೋರಿ ತಿಳಿಯೋಣ.
ಅರಿಬಾ ಅವರ ಸಾಧನೆಯ ಹಿಂದೆ ತಾ ಮಾವನ ಬೆಂಬಲವಿತ್ತು. ಸೋದರ ಮಾವನ ಕನಸ್ಸಿನಂತೆ ಅರಿಬಾ ಇಂದು ಪೊಲೀಸ್ ಅಧಿಕಾರಿಯಾಗಿದ್ದಾರೆ.ಅರಿಬಾ ನೋಮನ್ ಮೂಲತಃ ಉತ್ತರ ಪ್ರದೇಶದ ಸುಲ್ತಾನ್ ಪುರದವರು. ಕೊತ್ವಾಲಿ ನಗರದ ಪ್ಯಾರೆ ಪಟ್ಟಿ ನಿವಾಸಿ. ಅರಿಬಾ ನೋಮನ್ ಅವರ ತಂದೆ ನೋಮನ್ ಅಹ್ಮದ್ ಅವರು ಸುಲ್ತಾನ್ ಪುರದ ರಾಷ್ಟ್ರೀಯ ವಿಮಾ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾರೆ. ತಾಯಿ ರುಖ್ಸಾನಾ ನಿಖತ್ ಗೃಹಿಣಿ.
ಅರಿಬಾ 10 ನೇ ತರಗತಿಯವರೆಗೆ ಸ್ಟೆಲ್ಲಾ ಮೋರಿಸ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದಾರೆ. ಮೊದಲಿನಿಂದಲೂ ಓದಿನದಲ್ಲಿ ಮುಂದಿದ್ದ ಅರಿಬಾ ಟಾಪರ್ ಎನಿಸಿಕೊಂಡವರು. 10 ನೇ ಕ್ಲಾಸ್ ನಂತರ ಅರಿಬಾ ತನ್ನ ತಾಯಿಯ ಸೋದರ ಗುಫ್ರಾನ್ ಅಹ್ಮದ್ ಅವರೊಂದಿಗೆ ದೆಹಲಿಗೆ ಬಂದರು. ದೆಹಲಿಗೆ ಬಂದ ಮೇಲೆ ಅರಿಬಾ ಬದುಕೇ ಬದಲಾಯಿತು.
ದೆಹಲಿಯಲ್ಲಿ ಪಿಯು ಶಿಕ್ಷಣ ಪೂರೈಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ಪದವಿ ಮುಗಿದ ಮೇಲೆ ಅರಿಬಾ ಅವರಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತು.
ಆದರೆ ತನ್ನನ್ನು ದೊಡ್ಡ ಅಧಿಕಾರಿಯಾಗಿ ನೋಡುವ ಮಾವನ ಕನಸ್ಸಿಗೆ ಅರಿಬಾ ತಲೆಬಾಗಿದರು. ಇದೇ ಸಮಯದಲ್ಲಿ ಮಾವನ ಮನೆಗೆ ಸುಲ್ತಾನಪುರದ ಅಂದಿನ ಎಸ್ ಡಿಎಂ ಸದರ್ ಪ್ರಮೋದ್ ಪಾಂಡೆ ಬಂದರು. ಅವರ ಮಾರ್ಗದರ್ಶನದಲ್ಲಿ UPSC ಅಧ್ಯಯನಗಳ ಪ್ರಕ್ರಿಯೆಯು ಪ್ರಾರಂಭವಾಯಿತು.
ಸೂಕ್ತ ಮಾರ್ಗದರ್ಶನ ಹಾಗೂ ಕಠಿಣ ಪರಿಶ್ರಮದ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ 109ನೇ ರ್ಯಾಂಕ್ ಗಳಿಸಿದರು. ಆ ಮೂಲಕ ಐಪಿಎಸ್ ಅಧಿಕಾರಿಯಾದರು.ಪ್ರಸ್ತುತ ಐಪಿಎಸ್ ಅರಿಬಾ ಅವರು ಯುಪಿ ಕೇಡರ್ ಅಧಿಕಾರಿಯಾಗಿದ್ದಾರೆ.