ನೋಯ್ಡಾ, ಜು.24(DaijiworldNews/AA): ಕಳೆದ 24 ಗಂಟೆಯಲ್ಲಿ 6-7 ಮನೆಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿರುವುವ ಬಗ್ಗೆ ವರದಿಯಾಗಿದೆ. ಆದರೆ ವಿಚಿತ್ರವೆಂಬಂತೆ ಕಳ್ಳತನವಾದ ಪ್ರತಿ ಸ್ಥಳಗಳಲ್ಲೂ ಕಳ್ಳರು ಒಂದೇ ವಿಧಾನವನ್ನು ಅನುಸರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಹಾಗೂ ಲಕ್ಷಾಂತರ ರೂ.ಯನ್ನು ಕಳ್ಳತನ ಮಾಡುವ ವೇಳೆ ಮನೆಯಲ್ಲಿನ ಪ್ರಿಡ್ಜ್ ನ್ನು ಆಹಾರಕ್ಕಾಗಿ ಹುಡುಕಾಡುತ್ತಾರೆ. ಬಳಿಕ ಮನೆಯಲ್ಲಿ ಏನನ್ನಾದರೂ ಅಡುಗೆ ಮಾಡಿ ತಿಂದು ಅಲ್ಲಿಂದ ಪರಾರಿಯಾಗುತ್ತಿದ್ದಾರೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ನೋಯ್ಡಾದ ಸೆಕ್ಟರ್ 87ರ ಜಂತಾ ಫ್ಲಾಟ್ನಲ್ಲಿ ವಾಸಿಸುವ ಶ್ರೀರಾಮ್ ತ್ರಿಪಾಠಿ ಮನೆಯಲ್ಲಿ ಕಳ್ಳತನ ಮಾಡಿರುವ ಖದೀಮರು, ಮನೆಯಲ್ಲಿದ್ದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ನಗದು, ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ.
ತ್ರಿಪಾಠಿ ಅವರ ಮನೆಯಲ್ಲಿ ಕಳ್ಳತನ ಮಾಡಿದ ಬಳಿಕ ಖದೀಮರು ಪಕೋಡಾ ತಯಾರಿಸಿ, ತಿಂದು ನಂತರ ವಿಶ್ರಾಂತಿ ಪಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ನೋಯ್ಡಾದ ಸೆಕ್ಟರ್ 25 ರಲ್ಲಿ ರಿಚಾ ಬಾಜ್ಪೇಯ್ ಅವರ ಮನೆಯಲ್ಲಿ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಕಳ್ಳರು, ಅವರ ಮನೆಯಲ್ಲಿದ್ದ ಫ್ರಿಡ್ಜ್ ನಿಂದ ಹಲವಾರು ನೀರಿನ ಬಾಟಲಿಗಳನ್ನು ಖಾಲಿ ಮಾಡಿದ್ದಾರೆ. ಜೊತೆಗೆ ಬೀಡಿ ಸೇದಿ, ಪಾನ್ ತಿಂದು ಅದನ್ನು ಬಾತ್ ರೂಮ್ ನಲ್ಲಿ ಉಗುಳಿ ಹೋಗಿದ್ದಾರೆ ಎನ್ನಲಾಗಿದೆ.