ನವದೆಹಲಿ, ಜು 23 (DaijiworldNews/MS): ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2024-25ನೇ ಸಾಲಿನ ಕೇಂದ್ರ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ದೊರೆತಿದೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು. ಕೇಂದ್ರ ಬಜೆಟ್ ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಪಡೆದಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿದೆ. ಬಿಜೆಪಿ ಏಕಾಂಗಿಯಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿ ಸಮ್ಮಿಶ್ರ ಸರಕಾರ ರಚನೆಯಾದ ಬಳಿಕೆ ಮಂಡನೆಯಾಗುತ್ತಿರುವ ಈ ಬಜೆಟ್ ಅನ್ನು ಭಾರೀ ಕುತೂಹಲದಿಂದ ನೋಡಲಾಗುತ್ತಿದೆ.
ಬಜೆಟ್ಗೆ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಬಜೆಟ್ ಅಮೃತ್ ಕಾಲದ ಪ್ರಮುಖ ಬಜೆಟ್ ಆಗಿರಲಿದೆ. ಈ ಬಜೆಟ್ ನಮ್ಮ ಅಧಿಕಾರಾವಧಿಯ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸಲಿದೆ. ಈ ಬಜೆಟ್ ನಮ್ಮ ಕನಸಿನ 'ವಿಕಸಿತ ಭಾರತ’ಕ್ಕೆ ಭದ್ರ ಅಡಿಪಾಯ ಹಾಕಲಿದೆ” ಎಂದು ಹೇಳಿದ್ದಾರೆ.