ಹೈದರಾಬಾದ್, ಜು.22(DaijiworldNews/AA): ಸಾಮಾನ್ಯವಾಗಿ ಭತ್ತದ ಸಸಿಯನ್ನು ಗದ್ದೆಗಳಲ್ಲಿ ನೆಡುತ್ತೇವೆ. ಆದರೆ ಜನರು ರಸ್ತೆಯಲ್ಲಿನ ಬೃಹತ್ ಹೊಂಡಗಳಲ್ಲಿ ಭತ್ತದ ಸಸಿ ನೆಟ್ಟು ಪ್ರತಿಭಟನೆ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಕುತ್ಬುಲ್ಲಾಪುರದ ಬೌರಂಪೇಟ್ ನಿವಾಸಿಗಳು ರಸ್ತೆಯ ಕಳಪೆ ಕಾಮಗಾರಿ ಹಾಗೂ ಹೊಂಡಗಳಿಂದ ಬೇಸತ್ತು ಹೋಗಿದ್ದಾರೆ. ಈ ಸಂಬಂಧ ಪ್ರತಿಭಟನೆ ನಡೆಸಿದ ಅಲ್ಲಿನ ನಿವಾಸಿಗಳು ರಸ್ತೆಯಲ್ಲಿ ನೀರು ತುಂಬಿದ ಹೊಂಡಗಳಲ್ಲಿ ಭತ್ತದ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು.
ಜನರು ಈ ರೀತಿಯ ವಿಭಿನ್ನ ಪ್ರತಿಭಟನೆ ನಡೆಸುವ ಮೂಲಕ ಪುರಸಭೆಯ ಆಯುಕ್ತರು ಮತ್ತು ಸ್ಥಳೀಯ ಅಧಿಕಾರಿಗಳನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜನರು ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಲ್ಲಿ ಭತ್ತದ ಸಸಿ ನೆಟ್ಟಿದ್ದಾರೆ. ಹೊಂಡಗಳಿಮದ ಕೂಡಿರುವ ಈ ರಸ್ತೆ ಮಳೆ ಬಂದರೆ ಜಲಾವೃತಗೊಳ್ಳುತ್ತದೆ. ಹಾಳಾದ ಈ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸುವುದು ಕಷ್ಟಕರವಾಗಿದೆ. ಹೀಗಾಗಿ ಆದಷ್ಟು ಬೇಗನೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಪ್ರತಿಭಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗುಂಡಿಯ ಬಳಿ ಜನರು ಭತ್ತದ ಸಸಿಗಳನ್ನು ನೆಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.