ಬೆಂಗಳೂರು, ಜು 22 (DaijiworldNews/AK): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆರಂಭದಲ್ಲಿ ಹಗರಣ ನಡೆದೇ ಇಲ್ಲ ಎಂದಿದ್ದ ಮುಖ್ಯಮಂತ್ರಿಗಳು ಬಳಿಕ ಸಚಿವ ನಾಗೇಂದ್ರರ ರಾಜೀನಾಮೆ ಪಡೆದು ಹಗರಣ ನಡೆದುದನ್ನು ಒಪ್ಪಿಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ಕಾಂಗ್ರೆಸ್ ಸರಕಾರ ದ್ರೋಹ ಬಗೆದಿದೆ ಎಂದು ಟೀಕಿಸಿದರು.
ಸದನದಲ್ಲಿ ಸರಿಯಾಗಿ ಉತ್ತರ ಕೊಡದೆ ಜಾಹೀರಾತು ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದ ಅವರು, 187 ಕೋಟಿ ಹಗರಣದಲ್ಲಿ 45 ಕೋಟಿ ವಾಪಸ್ ಬಂದಿದೆ ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕದ್ದ ಮಾಲನ್ನು, ಲೂಟಿ ಮಾಡಿದ ಹಣವನ್ನು ಹೊರರಾಜ್ಯಕ್ಕೆ ಒಯ್ದು ಹೊರರಾಜ್ಯದಲ್ಲಿ ಚುನಾವಣೆಗೆ ಬಳಸಿದ್ದಾರೆ. ಹಣ ವಾಪಸ್ ಬಂದಿದೆ ಎಂದು ಜನರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಹಗರಣ ನಡೆದಿದೆ; ಕಳ್ಳತನ ಆಗಿದೆ; ಇದನ್ನು ಒಪ್ಪಲಾಗದು ಎಂದು ಎಚ್ಚರಿಸಿದರು.
ನೆರೆ ಹಾನಿ ಸಂಬಂಧ, ಮನೆ ಕುಸಿತಕ್ಕೆ ಸಂಬಂಧಿಸಿ ಬಿಜೆಪಿ ಸರಕಾರ ಕೊಟ್ಟ ಮಾದರಿಯಲ್ಲಿ ಒಂದು ಲಕ್ಷದ ಬದಲು 5 ಲಕ್ಷ ರೂ. ಕೊಡಬೇಕು. ಗೋಡೆ ಕುಸಿತಕ್ಕೆ ಎನ್ಡಿಆರ್ಎಫ್ ನಿಯಮದ 40 ಸಾವಿರ ಬದಲಾಗಿ 1 ಲಕ್ಷ ಕೊಡಿ ಎಂದು ಆಗ್ರಹಿಸಿದರು. ಡೆಂಗ್ಯೂ, ಇತರ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ವಿವರಿಸಿದರು. ವಾಲ್ಮೀಕಿ ನಿಗಮದ ಹೋರಾಟ ಕೈಬಿಟ್ಟಿಲ್ಲ; ಈ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದಲ್ಲಿ ದಲಿತರ ಹಣ ನುಂಗಿದ ಸರಕಾರದ ಹಗರಣ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇವೆ. ನಮ್ಮ ಹೋರಾಟದ ಬಳಿಕ ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಸರಕಾರ, ಮುಖ್ಯಮಂತ್ರಿಗಳ ಪಾತ್ರ ಕುರಿತು ಸದನದಲ್ಲಿ ದಾಖಲೆಗಳೊಂದಿಗೆ ಬಿಚ್ಚಿಟ್ಟಿದ್ದು, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಹಗರಣದ ಹಣ ಚುನಾವಣೆಯಲ್ಲಿ ಬಳಕೆಯಾದ ಕುರಿತು ಇ.ಡಿ. ತಿಳಿಸಿದೆ. ಮುಖ್ಯಮಂತ್ರಿಗಳು ಸರಿಯಾಗಿ ಉತ್ತರ ನೀಡಿಲ್ಲ; ವಿಪಕ್ಷವನ್ನು ಬೆದರಿಸುವುದು, ಹಿಂದಿನ ಬಿಜೆಪಿ ಆಡಳಿತಾವಧಿಯ ಹಗರಣಗಳ ಕುರಿತು ಮಾತನಾಡಿದ್ದಾರೆ ಎಂದು ಟೀಕಿಸಿದರು.
ಅಧಿಕಾರಿಗಳು 187 ಕೋಟಿ ತಿಂದಿದ್ದಾರೆ ಎಂದಿದ್ದಾರೆ. ಅವರೇನೋ ಒಂದೈವತ್ತು ಲಕ್ಷ ತಿಂದಿರಬಹುದು. ಹೆಚ್ಚು ಹಣ ತಿಂದವರು ನೀವು ಎಂದು ಆಕ್ಷೇಪಿಸಿದರು.
ಈಗ ಮೂಡ ಹಗರಣ, ಮಳೆ ಹಾನಿ, ಪ್ರವಾಹದ ಭಯ, ಪರಿಹಾರದ ಕುರಿತು, ಡೆಂಗ್ಯೂ ಮರಣಮೃದಂಗದ ವಿಚಾರವಾಗಿ ಚರ್ಚಿಸುತ್ತೇವೆ. ದಲಿತರ 25 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗಾಗಿ ಬಳಕೆ ವಿಚಾರವಾಗಿ ಕೂಡ ನಿಲುವಳಿ ಮೂಲಕ ಪ್ರಸ್ತಾಪಿಸುತ್ತೇವೆ ಎಂದರು.ಸಿಎಂ ರಾಜೀನಾಮೆ ಕುರಿತ ಹೋರಾಟ ನಿಲ್ಲಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.