ನವದೆಹಲಿ, ಜು.22(DaijiworldNews/AA): ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ನಾಳೆ ಕೇಂದ್ರ ಬಜೆಟ್ ಮಂಡನೆ ಮಾಡಲಿದೆ.
19 ದಿನಗಳ ಕಾಲ ನಡೆಯುವ ಈ ಅಧಿವೇಶನವು ಇಂದಿನಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮೀಕ್ಷಾ ವರದಿ ಮಂಡಿಸಲಿದ್ದು, ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿಯಾಗುವ ಸಾಧ್ಯತೆ ಇದೆ. ನೀಟ್, ನೆಟ್ ಪರೀಕ್ಷಾ ಅಕ್ರಮ, ಐಎಎಸ್ ಅಧಿಕಾರಿಗಳ ನೇಮಕಾತಿ ವಿವಾದ, ಅಗ್ನಿವೀರ್ ಯೋಜನೆ, ಮಣಿಪುರ ಹಿಂಸಾಚಾರ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಮೊದಲಾದ ಅಸ್ತ್ರಗಳನ್ನು ಹಿಡಿದು ವಿಪಕ್ಷಗಳು ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇಂಡಿಯಾ ಒಕ್ಕೂಟ ಸಜ್ಜಾಗಿದೆ.
ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ೫ ಮಸೂದೆ ಮಂಡನೆ ಮಾಡಲಿದೆ. ಹಣಕಾಸು ಮಸೂದೆ, 2024, ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 ಪಿಆರ್ಎಸ್ ಶಾಸನದ ಪ್ರಕಾರ, ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ ಸ್ಪಷ್ಟತೆ ಮತ್ತು ಒಮ್ಮುಖವನ್ನು ತರಲು ಎನ್ಡಿಎ ಯತ್ನಿಸುತ್ತದೆ.