ಕೋಲ್ಕತಾ, ಜು.21(DaijiworldNews/AK): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ತೊಂದರೆಗೆ ಸಿಲುಕಿದವರು ಬಂದು ನಮ್ಮ ಸಹಾಯ ಕೇಳಿದರೆ ಅವರಿಗೆ ಆಶ್ರಯ ಒದಗಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿಯ `ಹುತಾತ್ಮರ ದಿನ’ ರ್ಯಾಲಿಯಲ್ಲಿ ಅವರು ಮಾತನಾಡಿ, ಬಾಂಗ್ಲಾದ ಅಕ್ರಮ ವಲಸಿಗರಿಗೆ ಪಶ್ಚಿಮ ಬಂಗಾಳ ಸರ್ಕಾರ ಆಶ್ರಯ ನೀಡಿ, ಐಡಿ ಕಾರ್ಡ್ಗಳನ್ನು ಕೊಡಿಸಲು ನೆರವಾಗುತ್ತಿದೆ ಎಂಬ ಆರೋಪಗಳ ನಡುವೆ ಮಮತಾ ಬ್ಯಾನರ್ಜಿಯವರು ಹಿಂಸಾಚಾರದ ಸಂತ್ರಸ್ತರಿಗೆ ಆಶ್ರಯದ ಆಹ್ವಾನ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಸರ್ಕಾರವು ರಾಷ್ಟ್ರವ್ಯಾಪಿ ಕರ್ಫ್ಯೂವನ್ನು ವಿಸ್ತರಿಸಿದ್ದು, ಹಿಂಸಾಚಾರವನ್ನು ಹತ್ತಿಕ್ಕಲು ಪೊಲೀಸರಿಗೆ ಕಂಡಲ್ಲಿ ಗುಂಡು ಹಾರಿಸುವ ಅಧಿಕಾರ ಕೊಟ್ಟಿದೆ. ಬಾಂಗ್ಲಾ ಬೇರೆ ದೇಶವಾಗಿರುವ ಕಾರಣ ಅದರ ಬಗ್ಗೆ ನಾನು ಏನೂ ಮಾತನಾಡಲು ಸಾಧ್ಯವಿಲ್ಲ. ಅದರ ಕುರಿತು ಕೇಂದ್ರ ಸರ್ಕಾರ ಮಾತನಾಡಲಿದೆ ಎಂದರು.