ತಿರುವನಂತಪುರಂ, ಜು.21(DaijiworldNews/AA): ಕೇರಳದಲ್ಲಿ ನಿಫಾ ಸೋಂಕು ತಗುಲಿದ್ದ 14 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ನೀಡಿದ್ದು, ನಿಫಾ ಸೋಂಕು ತಗುಲಿದ್ದ ಪಾಲಕ್ಕಾಡು ಮಲಪ್ಪುರಂ ಜಿಲ್ಲೆಯ ಬಾಲಕ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಎನ್ಐವಿ-ಪುಣೆ ಶನಿವಾರ ಬಾಲಕನಿಗೆ ನಿಫಾ ವೈರಸ್ ಇರುವುದು ದೃಢಪಡಿಸಿತ್ತು. ಬಳಿಕ ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದರು.
ಬಾಲಕನನ್ನು ವೆಂಟಿಲೇಟರ್ನಲ್ಲಿಡಲಾಗಿತ್ತು. ಇಂದು ಬೆಳಗ್ಗೆ ಮೂತ್ರದ ಪ್ರಮಾಣ ಕಡಿಮೆಯಾಗಿದ್ದು, ಭಾರೀ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾನೆ. ಅಂತರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಆತನ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತ್ಯಕ್ರಿಯೆಯ ಕುರಿತು ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಬಾಲಕನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರಸ್ತುತ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಶನ್ನಲ್ಲಿಡಲಾಗಿದೆ. ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ.