ಬೆಂಗಳೂರು, ಜು. 20(DaijiworldNews/AA): ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಕಾನೂನಿನ ಎಲ್ಲಾ ನಿಯಮ ಗಾಳಿಗೆ ತೂರಿ ಪತ್ನಿ ಹೆಸರಿಗೆ ಮೂಡ ನಿವೇಶನ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಜೆ.ಎಚ್. ಪಟೇಲ್ ಸರ್ಕಾರ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದಾಗ ಹಾಗೂ 2017-18ರಲ್ಲಿ ಸಿಎಂ ಆಗಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಡಿಕೊಂಡಿದ್ದಾರೆ. ವಿಜಯನಗರ ಬಡಾವಣೆಯಲ್ಲಿ ಮುಡಾ ನಿಯಮಗಳ ವಿರುದ್ಧ ನಿವೇಶನಗಳನ್ನು ಪತ್ನಿ ಹೆಸರಿಗೆ ಮಾಡಿಸಿಕೊಂಡಿದ್ದಾರೆ. 39 ಚದರ ಅಡಿಯ 14 ನಿವೇಶನಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಂ ಹಾಗೂ ಮುಡಾ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ರಮೇಶ್ ಅವರು ದೂರು ಸಲ್ಲಿಸುವ ಜೊತೆಗೆ 400ಕ್ಕೂ ಹೆಚ್ಚು ಪುಟಗಳ ದಾಖಲೆ ಹಾಗೂ 'ಪುರಾವೆ' ಸಲ್ಲಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.