ಬೆಂಗಳೂರು, ಜು. 20(DaijiworldNews/AA): ವಿಧಾನಸೌಧದ ಪೂರ್ವ ಭಾಗದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆ ಸ್ಪೀಕರ್ ಯುಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧ ರಾಜಕೀಯ ನಾಯಕರ ಕಟ್ಟಡವಾಗಿರದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿರುತ್ತದೆ. ಆದರೆ ದೊಡ್ಡ ಕಟ್ಟಡಗಳನ್ನು ಸರಿಪಡಿಸುವಾಗ ಮತ್ತೊಂದು ಕಡೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು. ಗುಮ್ಮಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಫ್ಲೋರ್ಗಳು ಮಾತ್ರ ವ್ಯಾಪ್ತಿಗೆ ಬರುತ್ತದೆ. ಆದರೂ ಈ ವಿಚಾರವನ್ನ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ನಮ್ಮ ವ್ಯಾಪ್ತಿಯಲ್ಲಿನ ಫ್ಲೋರ್ಗಳನ್ನು ಸರಿಪಡಿಸಿದ್ದೇನೆ. ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ವ್ಯಾಪ್ತಿಗೆ ಗುಮ್ಮಟ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ತಿಳಿಸುತ್ತೇನೆ. ಇದು ಬಹಳ ವರ್ಷಗಳ ಹಳೆಯ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು ಎಂದರು.
ಗುಮ್ಮಟದಲ್ಲಿ ಸಣ್ಣ ಮಟ್ಟದ ಬಿರುಕು ಕಾಣಿಸಿಕೊಂಡಿದೆ. ಮಳೆ ಜೋರಾಗಿ ಬಂದರೆ ನೀರು ಕೂಡ ಲೀಕೇಜ್ ಆಗುತ್ತಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಅಧಿಕಾರಿಗಳೊಂದಿಗೆ ಇಂದು ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.