ನವದೆಹಲಿ, ಜು. 20(DaijiworldNews/AA): ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಜೈಲಿನಲ್ಲಿ ಕಡಿಮೆ ಕ್ಯಾಲರಿ ಇರುವ ಆಹಾರವನ್ನು ಸೇವಿಸುತ್ತಿದ್ದಾರೆ. ಕೇಜ್ರಿವಾಲ್ ವೈದ್ಯರು ನೀಡುವ ಡಯಟ್ ಚಾರ್ಟ್ ಪಾಲಿಸುತ್ತಿಲ್ಲ ಎಂದು ಲೆಫ್ಟಿನೆಂಟ್ ಗರ್ವನರ್ ವಿ.ಕೆ ಸಕ್ಸೇನಾ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರ ಪ್ರಧಾನ ಕಾರ್ಯದರ್ಶಿ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ವಿವರಿಸಲಾಗಿದ್ದು, ಅವರು ತೂಕ ಕಳೆದುಕೊಳ್ಳಲು ಕಾರಣಗಳೇನು ಎಂದು ತಿಳಿಸಲಾಗಿದೆ. ಕಡಿಮೆ ಕ್ಯಾಲರಿಗಳ ಕಾರಣದಿಂದಾಗಿ ಕೇಜ್ರಿವಾಲ್ ಅವರು ತೂಕವನ್ನು ಕಳೆದುಕೊಳ್ಳುತ್ತಾರೆ. ಜೂನ್ 6 ರಿಂದ ಜುಲೈ 13 ರ ನಡುವೆ ಅವರು ಸರಿಯಾದ ಆಹಾರ ಸೇವಿಸಿಲ್ಲ. ಇದರಿಂದಾಗಿ ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪತ್ರದಲ್ಲಿ ಜೈಲು ಅಧೀಕ್ಷಕರ ವರದಿಯನ್ನು ಉಲ್ಲೇಖ ಮಾಡಲಾಗಿದ್ದು, ಕೇಜ್ರಿವಾಲ್ ಅವರು ವೈದ್ಯರು ಸೂಚಿಸಿದ ಆಹಾರ ಮತ್ತು ಔಷಧಿಗಳನ್ನು ಸೇವಿಸದಿರುವ ಬಗ್ಗೆ ಎಲ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಕಡಿಮೆ ಕ್ಯಾಲರಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಕೇಜ್ರಿವಾಲ್ ವೈದ್ಯರು ನೀಡುವ ಡಯಟ್ ಚಾರ್ಟ್ ಪಾಲಿಸುತ್ತಿಲ್ಲ ಎಂದು ತಿಳಿಸಲಾಗಿದೆ.