ಕಾರವಾರ,ಜು. 18(DaijiworldNews/AK): ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ ನಾಲ್ಕು ದಿನವಾಗಿದೆ. ಧಾರಾಕಾರ ಮಳೆ ಮಧ್ಯೆ ತೆರುವು ಕಾರ್ಯಾಚರಣೆ ಮುಂದುವರೆದಿದೆ.
ಈ ಮಧ್ಯೆ ಮಣ್ಣು ಕುಸಿತ ಸ್ಥಳದಲ್ಲೇ ಚಾಲಕ ಸಮೇತ ಟಿಂಬರ್ ಲಾರಿ ಲೊಕೇಶನ್ ಮತ್ತು ಮೊಬೈಲ್ ಲೊಕೇಶನ್ ಪತ್ತೆ ಆಗಿದೆ. ಚಾಲಕ ಅರ್ಜುನ ಬಗ್ಗೆ ಅಧಿಕೃತ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.
ಘಟನೆಯಂದು ಬೆಳಿಗ್ಗೆ 11 ಗಂಟೆಗೆ ಲಾರಿ ಚಾಲಕ ಅರ್ಜುನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಜಿಪಿಎಸ್ನಲ್ಲಿ ಗುಡ್ಡ ಕುಸಿತದ ಸ್ಥಳದಲ್ಲೇ ಲಾರಿ ಇರುವುದಾಗಿ ತೋರಿಸಿದೆ. ಹೀಗಾಗಿ ಆತಂಕಗೊಂಡ ಲಾರಿ ಮಾಲೀಕ ಪೊಲೀಸರಿಗೆ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಅಬ್ಬರದ ಮಳೆಯಲ್ಲೂ ಜಿಲ್ಲಾಡಳಿತ ಕಾರ್ಯಾಚರಣೆ ಮುಂದುವರೆದಿದೆ.
ಲಾರಿ ಚಾಲಕ ಅರ್ಜುನ್ ಮೂಲತಃ ಕೇರಳ ಮೂಲದವರು. ಕೇರಳ ಮೂಲದ ಮುಬೀನ್ ಒಡೆತನದ ವೈಟ್ ಕಲರ್ ಬೆಂಜ್ ಲಾರಿ. ಈಗಾಗಲೇ ಪಕ್ಕದ ಗುಡ್ಡ ಕುಸಿಯುವ ಹಂತದಲ್ಲಿರುವುದರಿಂದ ಘಟನಾ ಸ್ಥಳಕ್ಕೆ ಮಾಧ್ಯಮದವರನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪ್ರಾಣ ಒತ್ತೆಯಿಟ್ಟು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡ ಕಾರ್ಯಾಚರಣೆ ಮಾಡುತ್ತಿದೆ.