ಬೆಂಗಳೂರು, ಜು. 18(DaijiworldNews/AK): ರಾಜ್ಯದಲ್ಲಿ ಹಲವೆಡೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ಥವ್ಯಸ್ಥವಾಗಿದ್ದು,ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಮನೆಗಳನ್ನ, ಜೀವ ಕಳೆದುಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದುವಿಧಾನಸಭೆ ಅಧಿವೇಶನದಲ್ಲಿ ಮಳೆ ಹಾನಿ ಕುರಿತು ಚರ್ಚೆ ನಡೆಸಿ, ಈ ವೇಳೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪರಿಹಾರ ಕ್ರಮಕ್ಕೆ ಎಲ್ಲಾ ಜಿಲ್ಲೆಗಳಿಗೆ 777.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಳೆ ಹಾನಿ ಪರಿಹಾರ ಕ್ರಮಕ್ಕೆ ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಸಂಪುಟ ಸಭೆಯಲ್ಲಿ ಹಾನಿ ಪರಿಹಾರ ಬಗ್ಗೆ ಚರ್ಚೆ ಮಾಡುತ್ತೇವೆ. ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆ ಆಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ ಶೇಕಡಾ 9ರಷ್ಟು ಹೆಚ್ಚು ಮಳೆಯಾಗಿದೆ. ಪರಿಹಾರ ಕ್ರಮಕ್ಕೆ ಎಲ್ಲಾ ಜಿಲ್ಲೆಗಳಿಗೆ 777.54 ಕೋಟಿ ರೂ. ನೀಡಲಾಗಿದ್ದು, ಮಳೆ ಹಾನಿ ಪರಿಹಾರ ಕ್ರಮಕ್ಕೆ ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.
6 ಜಿಲ್ಲೆಗಳಲ್ಲಿ 5 ಎನ್ಡಿಆರ್ಎಫ್ ತುಕಡಿ ನಿಯೋಜಿಸಲಾಗಿದೆ. ಸಮಸ್ಯೆ ಉಂಟಾಗುವ 2,225 ಗ್ರಾಮಗಳನ್ನು ಗುರುತಿಸಲಾಗಿದ್ದು, 1,200ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಅಲ್ಲದೇ ತಾಲೂಕು ಮಟ್ಟದ ಅಧಿಕಾರಿ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರವಾಹ ನಿರ್ವಹಣೆಗೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು, ಗ್ರಾ.ಪಂ. ಟಾಸ್ಕ್ಫೋರ್ಸ್ಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ನುಡಿದರು.