ಕೇರಳ, ಜು. 19(DaijiworldNews/AK): ಶ್ರೀಧನ್ಯಾ ಆರ್ಥಿಕವಾಗಿ ತೀರಾ ಬಡ ಕುಟುಂಬದಿಂದ ಬಂದವರು. ಅವರ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಬುಡಗಟ್ಟು ಜನಾಂಗಕ್ಕೆ ಸೇರಿದವರಾಗಿದ್ದರಿಂದ ಬಿಲ್ಲು ಮತ್ತು ಬಾಣಗಳನ್ನು ಮಾರಿ ಜೀವನ ನಡೆಸುತ್ತಿದ್ದರು.
ಸರ್ಕಾರದಿಂದ ನಿವೇಶನ ಪಡೆದರೂ ಕುಟುಂಬಕ್ಕೆ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ ಅಂತ ಆರ್ಥಿಕ ಪರಿಸ್ಥಿತಿ ಶ್ರೀಧನ್ಯ ಅವರದಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಶ್ರೀಧನ್ಯ ಸುರೇಶ್ 2018ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. 410ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿ ಆದರು.
UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಕೇರಳದ ಮೊದಲ ಬುಡಕಟ್ಟು ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಶ್ರೀಧನ್ಯ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯುವ ಮುನ್ನ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಲ್ಲಿ ಗುಮಾಸ್ತರಾಗಿಯೂ ಕೆಲಸ ಮಾಡಿದ್ದರು. ಇದಾದ ನಂತರ ಅವರು ವಯನಾಡಿನ ಬುಡಕಟ್ಟು ವಸತಿ ನಿಲಯದಲ್ಲಿ ವಾರ್ಡನ್ ಆಗಿ ಕೆಲಸ ಮಾಡಿದರು.
ಶ್ರೀಧನ್ಯಾ ಅವರು 2016 ಮತ್ತು 2017 ರಲ್ಲಿ UPSC ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎರಡೂ ಪ್ರಯತ್ನಗಳಲ್ಲಿ ವಿಫಲರಾದರು. ಸೋಲಿನಿಂದ ಕಂಗೆಡದೆ, ಛಲದಿಂದ ಪರಿಶ್ರಮಪಟ್ಟು 2018ರಲ್ಲಿ 410ನೇ ರ್ಯಾಂಕ್ ಪಡೆದು ಯಶಸ್ಸು ಗಳಿಸಿದರು. ತಮ್ಮ ಸಾಧನೆಯ ಮೂಲಕ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ.
ಯುಪಿಎಸ್ ಸಿ 3ನೇ ಪ್ರಯತ್ನದಲ್ಲಿ ಸಂದರ್ಶನಕ್ಕೆ ಆಯ್ಕೆಯಾದಾಗ ಶ್ರೀಧನ್ಯಾ ಬಳಿ ದೆಹಲಿಗೆ ಹೋಗಲು ಸಹ ಹಣ ಇರಲಿಲ್ಲ. ಸ್ನೇಹಿತರ ಬಳಿ ಹಣ ಕೇಳಿ ದೆಹಲಿಗೆ ಹೋಗಿ ಸಂದರ್ಶನ ನೀಡಿದ್ದರು.
ಒಬ್ಬ ಬುಡಕಟ್ಟು ಐಎಎಸ್ ಅಧಿಕಾರಿಯೂ ಇಲ್ಲದ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯಿಂದ ಬಂದವಳು ಎಂದು ಶ್ರೀಧನ್ಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಬೇಕೆಂದು ಅವರು ಬಯಸುತ್ತಾರೆ. ಶ್ರೀಧನ್ಯಾ ಸುರೇಶ್ ಅವರು ಪ್ರಸ್ತುತ ಪೆರಿಂತಲ್ಮನ್ನಾ ಕಂದಾಯ ವಿಭಾಗೀಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬುಡಕಟ್ಟು ಜನಾಂಗದ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ.